ಬೆಂಗಳೂರಿನ ಉಬರ್ ನಂದಿನಿ ಗೊತ್ತಾ?

0
89

 

ಅವರು ನಂದಿನಿ. ಬೆಂಗಳೂರಿಗೆ ಬಂದು ಅನೇಕ ವರ್ಷಗಳಾಗಿವೆ. ಇವರದು ಕಡುಬಡತನದ ಕುಟುಂಬ. ಒಂದು ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದವರು. ಇಂದು ತಮ್ಮ ಸ್ವಂತ ಆಫೀಸ್ ತೆರೆದು ಆರೇಳು ಜನರಿಗೆ ಕೆಲಸ ಕೊಟ್ಟಿದ್ದಾರೆ. ಅವರ ಕುಟುಂಬಗಳಿಗೂ ಆಸರೆಯಾಗಿ, ತಾನೂ ಕೂಡ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ನಂದಿನಿಯವರಿಗೆ ಓದುವುದು ಎಂದರೆ ತುಂಬಾ ಇಷ್ಟ. ಆ ಇಷ್ಟದಿಂದಲೇ ಕಷ್ಟಪಟ್ಟು ಚೆನ್ನಾಗಿ ಓದಿ ಡಾಕ್ಟರ್ ಆಗಬೇಕೆಂದು ಕನಸು ಕಂಡಿದ್ದರು. ಆದರೆ, ಬಡತನ ಅವರ ಆಸರೆಗೆ ಅಡ್ಡ ಬಂದಿತು. ತಂದೆ ಒಂದು ಚಿಕ್ಕ ಗುಡಿಯಲ್ಲಿ ಅರ್ಚಕರು. ಹೊಟ್ಟೆಗೆ ಊಟ ಸಿಗುವುದು ಕಷ್ಟ. ಅಂತಹ ಸಮಯದಲ್ಲಿ ಓದುವುದಾದರೂ ಹೇಗೆ ಹೇಳಿ? ಹಾಗಾಗಿ ಓದಿಗೆ ಪುಲ್ ಸ್ಟಾಪ್ ಇಡಬೇಕಾಯಿತು.
ಹೇಗೋ ಕೆಲವು ದಿನಗಳ ನಂತರ ನಂದಿನಿಯವರಿಗೆ ಮದುವೆ ಮಾಡಲಾಯಿತು. ಅವರ ಗಂಡ ಕೂಡ ಗುಡಿಯೊಂದರಲ್ಲಿ ಆರ್ಚಕರೇ. ತವರು ಮನೆಯ ಪರಿಸ್ಥಿತಿಗೂ ಗಂಡನ ಮನೆಯ ಪರಿಸ್ಥಿತಿಗೂ ಯಾವುದೇ ವ್ಯತ್ಯಾಸವೇ ಇರಲಿಲ್ಲ. ಅದೇ ಸಮಯದಲ್ಲಿ ಅವರ ತಂದೆಯವರು ಮರಣ ಹೊಂದಿದ್ದು, ತಂಗಿಯ ಜವಾಬ್ದಾರಿಯಯನ್ನು ಸಹ ಇವರೇ ವಹಿಸಿಕೊಳ್ಳಬೇಕಾಯಿತು. ಇದರಿಂದ ಜೀವನ ಮತ್ತಷ್ಟು ಕಷ್ಟವಾಯಿತು.


ಆಗ ನಂದಿನಿಯವರು ಏನಾದರೂ ಕೆಲಸ ಮಾಡಿ ಮನೆಗೆ ಆಸರೆಯಾಗಬೇಕೆಂದು ನಿಶ್ಚಿಯಿಸಿದರು. ಬಿಲ್ಡಿಂಗ್, ಮನೆಗಳಿಗೆ ಬಣ್ಣ ಹಚ್ಚುವುದು, ನಿರ್ಮಾಣ ವಲಯಕ್ಕೆ ಕಾರ್ಮಿಕರನ್ನು ಒದಗಿಸುವ ಗುತ್ತಿಗೆ ಮಾಡಿದರು. ಸ್ವಲ್ಪಕಾಲ ಟ್ರಾವೆಲ್ಸ್ ಒಂದರಲ್ಲೂ ದುಡಿದರು. ಆದರೆ, ಸ್ವಂತ ಏನಾದರೂ ಬಿಸಿನೆಸ್ ಮಾಡುವ ಕನಸಿತ್ತು. ತನ್ನ ಆಸೆಯನ್ನು ಸ್ನೇಹಿತರು, ಬಂಧುಗಳ ಬಳಿ ಹೇಳಿಕೊಂಡರು. ಆಗ ಅವರು ನೀಡಿದ ಸಲಹೆ ನಂದಿನಿಯವರ ಬದುಕಿನಲ್ಲಿ ತಿರುವು ಪಡೆಯಲು ಸಾಧ್ಯವಾಯಿತು.
ಇಷ್ಟಕ್ಕೂ ನಂದಿನಿಯರ ಸ್ನೇಹಿತೆ ನೀಡಿದ ಸಲಹೆ ಏನೆಂದರೆ, ಸಿಟಿಯಲ್ಲಿ ಉಬರ್ ಕ್ಯಾಬ್ ಕಂಪನಿ, ಉಬರ್ ದೊಸ್ತ್ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಅಡಿಯಲ್ಲಿ ಯಾರಾದರೂ ಉಬರ್ ನೆಟ್ ವರ್ಕ್ ಗೆ ಚಾಲಕರನ್ನು ಸೇರ್ಪಡೆಗೊಳಿಸಿದರೆ 2500 ರಿಂದ 3 ಸಾವಿರ ರೂಪಾಯಿ ತನಕ ಕಮೀಷನ್ ಕೊಡುತ್ತದೆ ಎಂದು ಸಲಹೆ ನೀಡಿದರು. ಆಗ ನಂದಿನಿ ಡ್ರೈವರ್ ಬೇಕಾಗಿದ್ದಾರೆಂದು ಬಸ್, ರೈಲು ನಿಲ್ದಾಣ, ಐಟಿಪಾರ್ಕ್ ಮುಂತಾದ ಕಡೆಗಳಿಗೆ ತೆರಳಿ ಚಾಲಕರನ್ನು ಮಾತನಾಡಿಸಿ, ಉಬರ್ ಬಗ್ಗೆ ವಿವರಿಸುತ್ತಿದ್ದರು.


ಆರಂಭದಲ್ಲಿ ಡ್ರೈವರ್ ಗಳಿಗೆ ಉಬರ್ ಬಗ್ಗೆ ಒಪ್ಪಿಸುವುದು ತುಂಬಾ ಕಷ್ಟವಾಗುತ್ತಿತ್ತು. ಕ್ರಮೇಣ ಬಿಸಿನೆಸ್ ಸುಧಾರಿಸಿತು. ಅಷ್ಟೇ ನಂದಿನಿಯವರ ಜೀವನ ಬದಲಾಗಿ ಹೋಯಿತು. ಸ್ವಾರಸ್ಯವೆಂದರೆ, ನಂದಿನಿಯವರು ಇದೂವರೆಗೂ 1,700ಕ್ಕೂ ಹೆಚ್ಚು ಚಾಲಕರನ್ನು ಉಬರ್ ಗೆ ಪರಿಚಯಿಸಿದ್ದಾರೆ. ತಿಂಗಳಿಗೆ ಸರಿಸುಮಾರು 2 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಮತ್ತೆ ಸ್ವಂತ ಆಫೀಸ್ ನಲ್ಲಿ ಆರು ಮಂದಿ ಸಹಾಯಕರನ್ನು ನೇಮಿಸಿಕೊಂಡು ಅವರ ಬದುಕಿಗೂ ನೆರವಾಗಿದ್ದಾರೆ.
ಡ್ರೈವಿಂಗ್ ಫಿಲ್ಡ್ ನಲ್ಲಿ ಮಹಿಳೆಯರೂ ಕೂಡ ಕೆಲಸ ಮಾಡಬಹುದು. ಮತ್ತೆ ಒಂದು ದೃಢ ಮನಸ್ಸಿದ್ದರೆ ಎಂತಹ ಕಷ್ಟವಾದರೂ ಎದುರಿಸಿ, ಸುಖದ ಬದುಕಿನ ಹಾದಿ ಹಿಡಿಯಬಹುದು ಎನ್ನುವುದಕ್ಕೆ ಉಬರ್ ನಂದಿನಿಯರೇ ಸಾಕ್ಷಿ ಅಲ್ಲವೇ..?

LEAVE A REPLY

Please enter your comment!
Please enter your name here