ನಟ ಪುನೀತ್ ರಾಜ್ ಕುಮಾರ್ ನಿಧನದ ನಂತರ ಗೌರವ ಸೂಚಿಸಿದ ಕಂಪನಿಗಳ ಸಂಖ್ಯೆ ಒಂದೆರಡಲ್ಲ. ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಇರುವ ಹಲವಾರು ಸಂಘಟನೆಗಳು ಪುನೀತ್ ರಾಜ್ ಕುಮಾರ್ ಅವರಿಗೆ ಗೌರವವನ್ನು ಸಲ್ಲಿಸಿವೆ. ತೆಲುಗಿನ ರಿಯಾಲಿಟಿ ಶೋಗಳು, ತಮಿಳಿನ ಯೂಟ್ಯೂಬ್ ಚಾನೆಲ್ ಗಳು ಹಾಗೂ ಹಿಂದಿಯ ಹಲವಾರು ಸುದ್ದಿ ವಾಹಿನಿಗಳು ಪುನೀತ್ ರಾಜ್ ಕುಮಾರ್ ಅವರಿಗೆ ತುಂಬಾ ವಿಶೇಷವಾದ ರೀತಿಯಲ್ಲಿ ಗೌರವವನ್ನು ಸಲ್ಲಿಸಿದವು.
ಹೇಳಿ ಕೇಳಿ ಪುನೀತ್ ರಾಜ್ ಕುಮಾರ್ ತುಂಬಾ ಜನಪ್ರಿಯತೆಯನ್ನು ಗಳಿಸಿದ್ದ ನಟ. ಹೀಗಾಗಿ ನೆಚ್ಚಿನ ನಟನಿಗೆ ಇಲ್ಲಿಯವರೆಗೂ ಯಾವುದೇ ದಿನವೂ ಬಿಡದ ಹಾಗೆ ಗೌರವವನ್ನು ಹಲವಾರು ಮಂದಿ ಸಲ್ಲಿಸುತ್ತಾ ಬಂದಿದ್ದಾರೆ. ಅಭಿಮಾನಿಗಳಂತೂ ಪುನೀತ್ ರಾಜ್ ಕುಮಾರ್ ಅವರನ್ನು ಮರೆಯದ ಹಾಗೆ ಪ್ರತಿ ನಿತ್ಯವೂ ನೆನೆಯುತ್ತಾ ಇದ್ದಾರೆ. ಇಂತಹ ಸಂದರ್ಭದಲ್ಲಿ ಹೊಸ ವರ್ಷದ ದಿನದಂದು ಕೆಎಂಎಫ್ ತನ್ನ ನಂದಿನಿ ಉತ್ಪನ್ನಗಳ ಹಾಲಿನ ಪಾಕೆಟ್ ಮೇಲೆ ಪುನೀತ್ ರಾಜ್ ಕುಮಾರ್ ಅವರ ಚಿತ್ರವನ್ನು ಮುದ್ರಿಸಿ ಗೌರವವನ್ನು ಸಲ್ಲಿಸಲಾಗಿದೆ ಎಂಬ ಸುದ್ದಿ ವೈರಲ್ ಆಗಿತ್ತು.
ಆದರೆ ಈ ಕುರಿತು ಇದೀಗ ಸ್ಪಷ್ಟನೆ ನೀಡಿರುವ ಕೆಎಂಎಫ್ ನಾವು ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಯಾವುದೇ ಉತ್ಪನ್ನದ ಮೇಲೂ ಕೂಡ ಮುದ್ರಿಸಿಲ್ಲ ಯಾರೋ ಅಭಿಮಾನಿಗಳು ಅದನ್ನು ಎಡಿಟ್ ಮಾಡಿ ಹಾಕಿದ್ದಾರೆ ಅಷ್ಟೆ ಅದೆಲ್ಲವೂ ಫೇಕ್ ಎಂದು ಹೇಳಿಕೆ ನೀಡಿದೆ. ಪುನೀತ್ ರಾಜ್ ಕುಮಾರ್ ಯಾವುದೇ ರೀತಿಯ ಹಣವನ್ನು ಪಡೆಯದೆ ನಂದಿನಿ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಹೀಗಾಗಿಯೇ ಅವರಿಗೆ ಕೆಎಂಎಫ್ ಈ ರೀತಿ ಗೌರವವನ್ನು ಸಲ್ಲಿಸಿದೆ ಎಂಬ ಸುದ್ದಿ ವೈರಲ್ ಆಗಿತ್ತು. ಇದೀಗ ಕೆಎಂಎಫ್ ನೀಡಿದ ಸ್ಪಷ್ಟನೆ ನಂತರ ಆ ಸುದ್ದಿಯನ್ನು ನಂಬಿದ ಅಪ್ಪು ಅಭಿಮಾನಿಗಳಲ್ಲಿ ಬೇಸರ ಉಂಟಾಗಿದೆ.