ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಐಎನ್‍ಎಕ್ಸ್ ಕಂಪನಿಯ ಮಾಲಕಿ ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪ ಏನು?
2012 ಏಪ್ರಿಲ್ 24 ರಂದು ಇಂದ್ರಾಣಿ ಮುಖರ್ಜಿ, ಕಾರು ಚಾಲಕ ಶ್ಯಾಮ್‌ವರ್ ರೈ ಮತ್ತು ಮಾಜಿ ಪತಿ ಸಂಜೀವ್ ಖನ್ನಾ ಸೇರಿ ಶೀನಾ ಬೋರಾಳನ್ನು ಹತ್ಯೆ ಮಾಡಿದ್ದಾರೆ. ಪುತ್ರಿಯ ಶವವನ್ನು ರಾಯಗಢ ಜಿಲ್ಲೆಯ ಕಾಡಿನಲ್ಲಿ ಎಸೆದು ಸುಟ್ಟು ಹಾಕಲಾಗಿದೆ ಎಂಬ ಆರೋಪ ಇಂದ್ರಾಣಿ ಮುಖರ್ಜಿ ಮೇಲಿತ್ತು.
ಈ ಸಂಬಂಧ 2015ರಲ್ಲಿ ಮುಂಬೈ ಪೊಲೀಸರು ಇಂದ್ರಾಣಿ ಮುಖರ್ಜಿ ಅವರನ್ನು ಬಂಧಿಸಿತ್ತು. ಹೈ ಪ್ರೊಫೈಲ್ ಪ್ರಕರಣದ ಹಿನ್ನೆಲೆಯಲ್ಲಿ ನಂತರ ಇದರ ತನಿಖೆ ಸಿಬಿಐಗೆ ವರ್ಗಾವಣೆಯಾಗಿತ್ತು. ಕಳೆದ 6.5 ವರ್ಷಗಳಿಂದ ಇಂದ್ರಾಣಿ ಮುಖರ್ಜಿ ಜೈಲಿನಲ್ಲಿದ್ದರು. ಪ್ರಕರಣದಲ್ಲಿ 2015ರಿಂದಲೂ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿಗೆ ಕೊನೆಗೂ ಜಾಮೀನು ದೊರಕಿದ್ದು, ಬಿಡುಗಡೆಯ ಭಾಗ್ಯ ಸಿಗಲಿದೆ. ನಾವು ಇಂದ್ರಾಣಿ ಮುಖರ್ಜಿ ಅವರಿಗೆ ನಾವು ಜಾಮೀನು 6.5 ವರ್ಷ ಬಹಳ ದೀರ್ಘ ಸಮಯವಾಗಿದೆ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.
ಅವರು ಈಗಾಗಲೇ ಸಾಕಷ್ಟು ಸುದೀರ್ಘ ಸಮಯವನ್ನು ಜೈಲಿನಲ್ಲಿ ಕಳೆದಿರುವುದರಿಂದ ಅವರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ. ಅವರು ಷರತ್ತುಬದ್ಧ ಜಾಮೀನು ಪಡೆಯಲು ಅರ್ಹತೆ ಪಡೆದಿದ್ದಾರೆ. ನಾವು ವಿಚಾರಣೆ ಮೇಲೆ ಪರಿಣಾಮ ಬೀರಬಹುದಾದ ಕಾರಣದಿಂದ ಈ ಪ್ರಕರಣದ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.