ಬೆಂಗಳೂರು ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡಗಳ ಎತ್ತರದ ಮಿತಿ ಮರುಪರಿಶೀಲಿಸಲು ಕೇಂದ್ರ ಸಚಿವರಿಗೆ ಮನವಿ: ಡಿ.ಕೆ. ಶಿವಕುಮಾರ್

Date:

ಬೆಂಗಳೂರು ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡಗಳ ಎತ್ತರದ ಮಿತಿ ಮರುಪರಿಶೀಲಿಸಲು ಕೇಂದ್ರ ಸಚಿವರಿಗೆ ಮನವಿ: ಡಿ.ಕೆ. ಶಿವಕುಮಾರ್

ನವದೆಹಲಿ: ಬೆಂಗಳೂರಿನಲ್ಲಿರುವ ಹೆಚ್ಎಎಲ್, ಜಕ್ಕೂರು, ವಾಯುನೆಲೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಕಟ್ಟಡ ಎತ್ತರದ ಮಿತಿಯಿಂದ ಅಭಿವೃದ್ಧಿ ಕಾಮಗಾರಿಗೆ ತೊಡಕಾಗಿದ್ದು, ಈ ಮಿತಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ನಾಗರೀಕ ವಿಮಾನಯಾನ ಸಚಿವರಿಗೆ ಮನವಿ ಮಾಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಹಿತಿ ನೀಡಿದರು.ಕೇಂದ್ರ ವಿಮಾನಯಾನ ಸಚಿವರಾದ ರಾಮ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಬುಧವಾರ ಮಾತನಾಡಿದರು.
“ಸಚಿವರೊಂದಿಗೆ ನಾಗರೀಕ ವಿಮಾನಯಾನ ಸಚಿವಾಲಯ ಹಾಗೂ ಹೆಚ್ಎಎಲ್ ನಿಂದ ಎತ್ತರದ ಮಿತಿ ಬಗ್ಗೆ ಚರ್ಚೆ ಮಾಡಿದೆವು. ಹೈದರಾಬಾದ್, ಮುಂಬೈ ಸೇರಿದಂತೆ ಬೇರೆ ಕಡೆಗಳಲ್ಲಿ ಮಿತಿ ಕಡಿಮೆ ಇದೆ. ಬೇರೆ ನಗರಗಳಲ್ಲಿ ಅರುವಂತೆ ಬೆಂಗಳೂರಿನಲ್ಲೂ ಎತ್ತರದ ಮಿತಿ ಇರಬೇಕು ಎಂದು ಮನವಿ ಮಾಡಿದ್ದೇವೆ. ಈ ಕಟ್ಟಡ ಎತ್ತರದ ಮಿತಿಯಿಂದಾಗಿ ಬೆಂಗಳೂರಿನಲ್ಲಿ ನಾಗರೀಕರು ಪ್ರೀಮಿಯಂ ಎಫ್ಎಆರ್ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದರಿಂದ ಸರ್ಕಾರಕ್ಕೂ ಹಣ ಬರುತ್ತಿಲ್ಲ.
ಕೇಂದ್ರ ಸರ್ಕಾರವೇ ಎಫ್ಎಆರ್ ಕಡಿಮೆ ಮಾಡಿ ಪ್ರೀಮಿಯಂ ಎಫ್ಐಆರ್ ಹೆಚ್ಚಿಸಿ ಎಂದು ಹೇಳುತ್ತದೆ. ಹೀಗಾಗಿ ನಾವು ಅನೇಕ ತೀರ್ಮಾನ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿರುವೆ. ಅವರು ರಕ್ಷಣಾ ಮಂತ್ರಿ ಜತೆಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ನಮ್ಮ ಅಧಿಕಾರಿಗಳು ಹೆಚ್ಎಎಲ್ ಜತೆ ಚರ್ಚೆ ಮಾಡಿದ್ದಾರೆ. ನಾನು ಕೂಡ ರಕ್ಷಣಾ ಸಚಿವರ ಭೇಟಿಗೆ ಸಮಯ ತೆಗೆದುಕೊಂಡು ನಮ್ಮ ಈ ಸಮಸ್ಯೆಗಳನ್ನು ಅವರಿಗೆ ವಿವರಿಸುತ್ತೇನೆ. ಬೆಂಗಳೂರಿನ ಅಭಿವೃದ್ಧಿಗಾಗಿ ನಾವು ಒಂದು ಪರಿಹಾರ ಕಂಡುಕೊಳ್ಳುತ್ತೇವೆ” ಎಂದು ತಿಳಿಸಿದರು.
“ನಾನು, ಸಚಿವರಾದ ಬೋಸರಾಜು, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅವರು ಇಂದು ನಾಗರೀಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿದೆವು. ಬೆಂಗಳೂರು ಬೆಳವಣಿಗೆ ಹಾಗೂ ಸಂಚಾರ ದಟ್ಟಣೆ ನಿವಾರಣೆ ಮಾಡಬೇಕಿದೆ. ಹೊರವಲಯದಲ್ಲಿ ಬಡಾವಣೆಗಳು ಹೆಚ್ಚುತ್ತಿವೆ. ಅಲ್ಲೆಲ್ಲಾ ವಾಹನಗಳ ಸಂಖ್ಯೆ ಹೆಚ್ಚಾಗಿವೆ. ಬೆಂಗಳೂರು ನಗರದಲ್ಲಿ ಹೆಚ್ಎಎಲ್, ಜಕ್ಕೂರು, ಯಲಹಂಕದ ವಾಯುನೆಲೆ ಹಾಗೂ ದೇವನಹಳ್ಳಿಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣವಿದೆ. ಈ ಸುತ್ತಮುತ್ತಲ ಪ್ರದೇಶದಲ್ಲಿ ಎತ್ತರದ ಕಟ್ಟಡ ನಿರ್ಮಾಣ ಸಾಧ್ಯವಾಗುವುದಿಲ್ಲ” ಎಂದರು.
ಸರ್ಕಾರಕ್ಕೆ ಸಹಕಾರ ನೀಡದ ನೈಸ್ ಸಂಸ್ಥೆಗೆ ತಕ್ಕ ಉತ್ತರ:
“ನಾನು ಸ್ಕೈಡೆಕ್ ಮಾಡಲು ಎರಡೂವರೆ ವರ್ಷಗಳಿಂದ ಪ್ರಯತ್ನಪಟ್ಟ ಬಳಿಕ ಈಗ ಕೆಂಪೇಗೌಡ ಲೇಔಟ್ ನಲ್ಲಿ ನಿರ್ಮಿಸಲು ಮುಂದಾಗಿದ್ದೇವೆ. ವಿಮಾನ ನಿಲ್ದಾಣ ಸುತ್ತಮುತ್ತ 20 ಕಿ.ಮೀ ದೂರದಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ. ಎನ್ ಜಿಎಫ್ ಬಳಿ ಸ್ಕೈಡೆಕ್ ಮಾಡಲು ಜಾಗ ಉತ್ತಮವಾಗಿತ್ತು. ಮೆಟ್ರೋ ಸೌಲಭ್ಯವಿತ್ತು. ಜತೆಗೆ ನೈಸ್ ರಸ್ತೆ ಬಳಿ ಸೋಂಪುರ ವೃತ್ತದ ಬಳಿ ನಿರ್ಮಾಣಕ್ಕೆ ಸಲಹೆ ನೀಡಿದ್ದರು. ಆದರೆ ನೈಸ್ ಸಂಸ್ಥೆಯವರು ಸಹಕಾರ ನೀಡಲಿಲ್ಲ. ನೈಸ್ ಸಂಸ್ಥೆ ವಿಚಾರವಾಗಿ ಏನು ಮಾಡಬೇಕು ಎಂದು ಮುಂದೆ ತೀರ್ಮಾನ ಮಾಡುತ್ತೇವೆ. ಅವರು ನಿರಾಕ್ಷೇಪಣ ಪತ್ರವನ್ನು ನೀಡಲಿಲ್ಲ. ಸರ್ಕಾರಕ್ಕೆ ಸಹಕಾರ ನೀಡದವರಿಗೆ ತಕ್ಕ ಉತ್ತರ ನೀಡಬೇಕಾಗುತ್ತದೆ” ಎಂದು ಹೇಳಿದರು.
“ಅಂತರರಾಷ್ಟ್ರೀಯ ಮಟ್ಟದಲ್ಲಿರುವ ಮಾರ್ಗಸೂಚಿ ಹಾಗೂ ದೇಶದ ಇತರೆ ನಗರಗಳಲ್ಲಿ ಇರುವ ಮಾರ್ಗಸೂಚಿ ಬಗ್ಗೆ ಅಧ್ಯಯನ ಮಾಡುತ್ತಿರುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ. ಮುಂದಿನ ಒಂದು ವಾರದಲ್ಲಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ನಮ್ಮ ಅಧಿಕಾರಿಗಳಿಗೂ ಭಾಗವಹಿಸಲು ಹೇಳಿದ್ದಾರೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ಬರುತ್ತಿದ್ದು, ಭೂ ಸಂತ್ರಸ್ತರು ತಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಮುಂದಾಗುತ್ತಾರೆ. ಅವರಿಗೆ ಎತ್ತರದ ಮಿತಿ ಇದ್ದರೆ ಕಷ್ಟವಾಗುತ್ತದೆ” ಎಂದು ತಿಳಿಸಿದರು.
ಎರಡನೇ ವಿಮಾನ ನಿಲ್ದಾಣದ ಬಗ್ಗೆ ರಾಜ್ಯ ಸರ್ಕಾರ ಚರ್ಚಿಸಿ ತೀರ್ಮಾನ
“ಇನ್ನು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಿಚಾರವಾಗಿ ಕೇಂದ್ರ ಸರ್ಕಾರ ತಮ್ಮ ಅಭಿಪ್ರಾಯ ಕಳುಸಿದ್ದು, ನೀವೇ ಜಾಗ ನಿಗದಿ ಮಾಡಿ ಎಂದು ಹೇಳಿದೆ. ನಮ್ಮ ಬಳಿ ಎರಡು ಮೂರು ಆಯ್ಕೆಗಳಿದ್ದು, ನಮ್ಮ ಸರ್ಕಾರ ಇದರ ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ತೀರ್ಮಾನ ಮಾಡಲಿದೆ. ನಾನು ಬೆಂಗಳೂರಿಗೆ ವಾಪಸ್ಸಾದ ಬಳಿಕ ಕೇಂದ್ರ ಸರ್ಕಾರ ಕಳುಹಿಸಿರುವ ಅಭಿಪ್ರಾಯ ಪರಿಶೀಲನೆ ಮಾಡುತ್ತೇನೆ. ನಾನು ಬೆಂಗಳೂರು ದೃಷ್ಟಿಯಿಂದ ಈ ವಿಚಾರವನ್ನು ಕೇಂದ್ರ ಸಚಿವರ ಜತೆ ಪ್ರಸ್ತಾಪಿಸಿದೆ. ಈ ವಿಮಾನ ನಿಲ್ದಾಣ ನಿರ್ಮಾಣದ ಜವಾಬ್ದಾರಿ ಸಚಿವರಾದ ಎಂ.ಬಿ. ಪಾಟೀಲ್ ಅವರು ನೋಡಿಕೊಳ್ಳುತ್ತಾರೆ” ಎಂದರು.

Share post:

Subscribe

spot_imgspot_img

Popular

More like this
Related

ಪ್ರಜ್ವಲ್ ವಿಡಿಯೋ ವೈರಲ್ ಕೇಸ್: SIT ಚಾರ್ಜ್​ಶೀಟಲ್ಲಿ ಸ್ಫೋಟಕ ಅಂಶ ಬಯಲು

ಪ್ರಜ್ವಲ್ ವಿಡಿಯೋ ವೈರಲ್ ಕೇಸ್: SIT ಚಾರ್ಜ್​ಶೀಟಲ್ಲಿ ಸ್ಫೋಟಕ ಅಂಶ ಬಯಲು ಹಾಸನ:...

ಇರಾನ್–ಇಸ್ರೇಲ್ ಯುದ್ಧ ಎಫೆಕ್ಟ್: ರಾಜ್ಯದಲ್ಲಿ LPG ಸಂಕಷ್ಟ, ಹೋಟೆಲ್ಗಳಿಗೆ ಬೀಗ

ಇರಾನ್–ಇಸ್ರೇಲ್ ಯುದ್ಧ ಎಫೆಕ್ಟ್: ರಾಜ್ಯದಲ್ಲಿ LPG ಸಂಕಷ್ಟ, ಹೋಟೆಲ್ಗಳಿಗೆ ಬೀಗ ಬೆಂಗಳೂರು: ಇರಾನ್–ಇಸ್ರೇಲ್...

ಫುಡ್ ಪಾಯಿಸನ್‌ ಗೆ ಮದ್ಯಪಾನ ಪರಿಹಾರವೇ? ತಜ್ಞರು ಹೇಳೋದೇನು?

ಫುಡ್ ಪಾಯಿಸನ್‌ ಗೆ ಮದ್ಯಪಾನ ಪರಿಹಾರವೇ? ತಜ್ಞರು ಹೇಳೋದೇನು? “ಭಾರಿ ಊಟದ ನಂತರ...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...