ಯುದ್ಧದಿಂದ ಸಿಲಿಂಡರ್ ಪೂರೈಕೆ ವ್ಯತ್ಯಯ: ಕೇಂದ್ರ ಕ್ರಮ ಕೈಗೊಳ್ಳುತ್ತಿದೆ – ವಿಜಯೇಂದ್ರ

tnit editors
1 Min Read

ಯುದ್ಧದಿಂದ ಸಿಲಿಂಡರ್ ಪೂರೈಕೆ ವ್ಯತ್ಯಯ: ಕೇಂದ್ರ ಕ್ರಮ ಕೈಗೊಳ್ಳುತ್ತಿದೆ – ವಿಜಯೇಂದ್ರ

ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಧ್ಯಪ್ರಾಚ್ಯದಲ್ಲಿ ನಡೆದ ದಿಢೀರ್ ಯುದ್ಧದ ಪರಿಣಾಮವಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಆದರೆ ಈ ವಿಚಾರ ತಿಳಿದಿದ್ದರೂ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ವಿಧಾನಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ದಾಖಲೆಯ ಬಜೆಟ್ ಮಂಡಿಸಿದ್ದಾರೆ. ಆದರೆ ರಾಜ್ಯದ ಪರಿಸ್ಥಿತಿ ಈಗ ಎಲ್ಲಿಗೆ ತಲುಪಿದೆ ಎಂದರೆ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ವೇತನ ನೀಡಲು ಸಹ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಫೆಬ್ರವರಿ ತಿಂಗಳ ವೇತನವನ್ನೇ ನೀಡಲಾಗದ ಸ್ಥಿತಿಗೆ ರಾಜ್ಯ ಸರ್ಕಾರ ಬಂದಿದೆ. ರಾಜ್ಯ ದಿವಾಳಿಯತ್ತ ಸಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ ಎಂದು ಪ್ರಶ್ನಿಸಿದರು.
ದಾಖಲೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ರಾಜ್ಯದ ಅಭಿವೃದ್ಧಿಗೆ ಉತ್ತಮ ಅವಕಾಶ ಇತ್ತು. ಆದರೆ ಅವರು ಆ ಅವಕಾಶವನ್ನು ಬಳಸಿಕೊಳ್ಳದೆ ಎಲ್ಲವನ್ನೂ ಕೈಚೆಲ್ಲಿ ಕೂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಯುದ್ಧ ಆರಂಭವಾಗಲಿದೆ ಎಂದು ಯಾರಿಗೂ ಮುಂಚಿತವಾಗಿ ತಿಳಿದಿರಲಿಲ್ಲ. ದಿಢೀರ್ ಆರಂಭವಾದ ಯುದ್ಧದ ಪರಿಣಾಮವಾಗಿ ಇಂತಹ ಸಮಸ್ಯೆಗಳು ಎದುರಾಗಿವೆ. ಇಂತಹ ಸಾಮಾನ್ಯ ವಿಚಾರಗಳ ಅರಿವೂ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ಅವರು ಟೀಕಿಸಿದರು.
ಅಡುಗೆ ಅನಿಲ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಪರಿಹಾರ ದೊರೆಯಲಿದೆ. ಯುದ್ಧದ ಪರಿಣಾಮಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದ್ದು, ಯಾವುದೇ ಸಮಸ್ಯೆಯನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಸಾಮರ್ಥ್ಯವಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Share This Article