ಸಿಎಂ ಕುರ್ಚಿ ರಾಜಕೀಯ ಗುದ್ದಾಟದ ನಡುವೆ ಸಚಿವರ ಆಪ್ತರ ನಿವಾಸಗಳ ಮೇಲೆ ಇಡಿ ದಾಳಿ

tnit editors
1 Min Read

ಸಿಎಂ ಕುರ್ಚಿ ರಾಜಕೀಯ ಗುದ್ದಾಟದ ನಡುವೆ ಸಚಿವರ ಆಪ್ತರ ನಿವಾಸಗಳ ಮೇಲೆ ಇಡಿ ದಾಳಿ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿ ಸಂಬಂಧ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ಉಂಟಾಗಿರುವ ಸಂದರ್ಭದಲ್ಲಿ, ಕಾಂಗ್ರೆಸ್ ಶಿಬಿರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದುಕೊಳ್ಳುತ್ತಿವೆ. ಸಚಿವರು, ಶಾಸಕರು ಮುಂದೇನು ಆಗಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿರುವ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಕೆಲವು ಸಚಿವರ ಆಪ್ತರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿಯಿಂದ ಬಂದಿದ್ದ ಇಡಿ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ಪರಿಶೀಲನೆ ಆರಂಭಿಸಿದೆ.

ಮಾಹಿತಿಯ ಪ್ರಕಾರ, ಐಟಿ ಇಲಾಖೆಯ ವರದಿ ಆಧಾರದ ಮೇಲೆ ಇಡಿ ಪ್ರತ್ಯೇಕ ಕೇಸ್ ದಾಖಲಿಸಿಕೊಂಡಿತ್ತು. ಅದರ ಆಧಾರದ ಮೇಲೆ ಇಡಿ ತಂಡಗಳು ಬೆಂಗಳೂರಿನ ವಿವಿಧೆಡೆ ಪ್ರತಿಷ್ಠಿತ ಬಿಲ್ಡರ್‌, ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕೆಲ ಸಚಿವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿವೆ.

ಪ್ರತಿಷ್ಠಿತ ಬಿಲ್ಡರ್ಸ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆಗೆ ಕೆಲ ಸಚಿವರ ಆಪ್ತರ ನಿವಾಸಗಳ ಮೇಲೂ ದಾಳಿ ನಡೆದಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ. ಆದರೆ ಯಾವ-ಯಾವ ಸಚಿವರ ಆಪ್ತರ ಮೇಲೆ ದಾಳಿ ನಡೆದಿದೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

Share This Article