ಅಕ್ರಮ ಗಣಿಗಾರಿಕೆ ವಿರುದ್ಧ ನಾವು ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ: ಸಿಎಂ ಸಿದ್ದರಾಮಯ್ಯ
ಕೊಪ್ಪಳ: ಅಕ್ರಮ ಗಣಿಗಾರಿಕೆ ವಿರುದ್ಧ ನಾವು ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿದ ಅವರು, 2008-2013ರವರೆಗೆ ವಿರೋಧಪಕ್ಷದ ನಾಯಕನಾಗಿ , ಲೋಕಾಯುಕ್ತ ಸಂತೋಷ್ ಹೆಗಡೆ ಅವರ ಅಕ್ರಮ ಗಣಿಗಾರಿಕೆಯ ವರದಿ ಆಧರಿಸಿ,
ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಅಂದು ಬಿಜೆಪಿಸರ್ಕಾರದ ಅದನ್ನು ವಿರೋಧಿಸಿತ್ತು. ಅಂದು ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸಿದ ಹೋರಾಟಕ್ಕೆ ಇಂದು ಫಲ ದೊರೆತಿದೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಶಿಕ್ಷೆಯಾಗಬೇಕು ಹಾಗೂ ಅಕ್ರಮ ಗಣಿಗಾರಿಕೆ ನಿಲ್ಲಬೇಕು ಎಂದು ತಿಳಿಸಿದರು.
ಇನ್ನೂ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಅನರ್ಹತೆಯ ಕುರಿತ ಪ್ರಶ್ನೆಗೆ ಉತ್ತರಿಸಿ, ನ್ಯಾಯಾಲಯ ಅವರಿಗೆ ಏಳು ವರ್ಷಗಳ ಶಿಕ್ಷೆಗೆ ಗುರಿಪಡಿಸಿದ್ದು, ಸಂವಿಧಾನದಂತೆ ಅವರು ಅನರ್ಹರಾಗುತ್ತಾರೆ. ಈ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದರೆ,
ಪಕ್ಷದ ತೀರ್ಮಾನದಂತೆ ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಗಂಗಾವತಿ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಖಂಡಿತ ಗೆಲ್ಲುತ್ತದೆ. ಪ್ರಜಾಪ್ರಭುತ್ವದಲ್ಲಿ ಟೀಕಿಸುವುದು ಸಹಜ. ಆದರೆ ನಮ್ಮ ಸರ್ಕಾರದ ಸಾಧನೆ, ನಮ್ಮ ಬದ್ಧತೆಯ ಬಗ್ಗೆ ಜನರಿಗೆ ತಿಳಿದೇ ತಿಳಿಯುತ್ತದೆ ಎಂದರು.