ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ನಾಗೇಂದ್ರ ವಿಧಾನಸೌಧದಲ್ಲಿ ತುರ್ತು ಮಾಧ್ಯಮಗೋಷ್ಟಿಯದ್ದೇಶಿಸಿ ಮಾತನಾಡಿದರು. ನೆನ್ನೆ ನಡೆದ ಘಟನೆಯಲ್ಲಿ ನಿಗಮದ ಲೆಕ್ಕಾಧಿಕಾರಿಯ ಕುಟುಂಬಕ್ಕೆ ವಿಷಾದ ವ್ಯಕ್ತಪಡಿಸುವೆ, ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹೆಸರನ್ನು ಯಾಕೆ ತಳುಕು ಹಾಕಲಾಗಿದೆ ಎಂಬುವುದೇ ನನಗೆ ಗೊತ್ತಿಲ್ಲ. ಈ ಪ್ರಕರಣದ ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ತನಿಖಾ ವರದಿ ಪ್ರಕಾರ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ಆತ್ಮಹತ್ಯೆ ಮಾಡಿಕೊಂಡ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ್ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಇದರ ಆಧಾರದ ಮೇಲೆ ನಮ್ಮ ಇಲಾಖೆಯ ಅಧಿಕಾರಿಗಳ ಮೇಲೆ ದೂರು ದಾಖಲಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿ ಸಹ ಮಾಹಿತಿ ಪಡೆದುಕೊಂಡಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರ (ಎಂಡಿ) ಸಹಿಯನ್ನು ವಿಧಿವಿಜ್ಞಾನ ಪ್ರಾಯೋಗಾಲಯಕ್ಕೆ (ಎಫ್ಎಸ್ಎಲ್) ರವಾನಿಸಲಾಗಿದೆ. ಈ ಸಹಿ ಎಂಡಿ ಅವರದ್ದೇ ಎಂದು ದೃಢಪಟ್ಟರೆ, ಅವರನ್ನೂ ಕೂಡ ವಜಾ ಮಾಡುತ್ತೇವೆ. ಇದರಲ್ಲಿ ಯಾರ ಕೈವಾಡ ಇದೆ ಎಂಬುವುದನ್ನು ಪತ್ತೆ ಹೆಚ್ಚುತ್ತೇವೆ.
ಇಂದು ಬೆಳಗ್ಗೆಯಿಂದಲೇ ಸಿಐಡಿ ತನಿಖೆ ಮಾಡುತ್ತಿದೆ. ಎಂಡಿ ಸೇರಿದಂತೆ ತಪ್ಪು ಮಾಡಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು. ಅಧಿಕಾರಿ ಆತ್ಮಹತ್ಯೆ ಸಂಬಂಧ ರಾಜೀನಾಮೆಗೆ ಒತ್ತಡ ಕೇಳಿ ಬರುತ್ತಿರುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ನಾಗೇಂದ್ರ, ಬಿಜೆಪಿಯವರ ಪ್ರಕಾರ, ನನ್ನ ರಾಜೀನಾಮೆ ಕೇಳುವುದು ಸರಿ ಇರಬಹುದು. ಆದರೆ, ನನ್ನ ಹೆಸರು ಯಾಕೆ ತಳುಕು ಹಾಕಿದ್ದಾರೆ ಎಂಬುವುದೇ ನನಗೆ ಗೊತ್ತಿಲ್ಲ. ಇದು ನನ್ನ ವ್ಯಾಪ್ತಿಯೇ ಇಲ್ಲ. ಈ ಬಗ್ಗೆ ಸಿಐಡಿಗೆ ತನಿಖೆ ವಹಿಸಲಾಗಿದೆ ಎಂದು ಹೇಳಿದರು.
ಅಧಿಕಾರಿ ಆತ್ಮಹತ್ಯೆ ಪ್ರಕರಣ: ಸಿಐಡಿ ತನಿಖೆಗೆ ಆದೇಶಿಸಲಾಗಿದೆ !
Date:






