ಸಿಂಧುತಾಯಿ ಸಪ್ಕಾಲ್. ಅನಾಥ ಮಕ್ಕಳ ಪಾಲಿನ ಮಮತಾಮಯಿ, ಸಾವಿರಾರು ಮಕ್ಕಳ ಜೀವನಕ್ಕೆ ದಾರಿದೀಪವಾಗಿದ್ದಾರೆ. ಅನಾಥ ಮಕ್ಕಳಿಗಾಗಿ ಜನ್ಮತಾಳಿ, ನಿಸ್ವಾರ್ಥಗೈದ ಸಿಂಧುತಾಯಿ ಅನಾಥ ಮಕ್ಕಳ ಪಾಲಿನ ದೇವತೆಯಾಗಿದ್ದಾರೆ.
ಸಿಂಧುತಾಯಿ ಸಪ್ಕಾಲ್, ಅವರಿಗೆ ಬಾಲ್ಯ ವಿವಾಹವಾಗಿದ್ದು, ಮಹಾರಾಷ್ಟ್ರದ ನವಾರ್ಗಾಂವ್ ಗ್ರಾಮದ ಶ್ರೀಹರಿ ಎಂಬುವರೊಂದಿಗೆ ತಂದೆತಾಯಿಯವರ ಒತ್ತಡಕ್ಕೆ ಮದುವೆಯಾಗಿದ್ದರು. ಇನ್ನು 20 ವರ್ಷ ಆಗುವಷ್ಟರಲ್ಲೇ 3 ಮಕ್ಕಳ ತಾಯಿಯಾದರು. ಗಂಡನ ಮನೆಯವರು ಸಿಂಧುತಾಯಿಗೆ ಬಹಳಷ್ಟು ಕಿರುಕುಳ ಕೊಡುತ್ತಿದ್ದರು. ಮತ್ತೆ, ತವರಿನ ಮನೆಯವರಿಂದಲೂ ತಿರಸ್ಕರಿಸಲ್ಪಟ್ಟರು. ಕೊನೆಗೆ ಸ್ಮಶಾನದಲ್ಲಿ ಬದುಕು ಸವೆಸಿದರು.
ಆಮೇಲೆ ಅವರು ಭಿಕ್ಷೆ ಬೇಡುವುದರಲ್ಲಿ ನಿರತರಾದರು. ರೈಲು, ಬಸ್ ನಿಲ್ದಾಣ, ದೇವಸ್ಥಾನಗಳ ಹತ್ತಿರ ನಿತ್ಯವೂ ನೂರಾರು ಮಕ್ಕಳು ಒಂದು ತುತ್ತಿಗಾಗಿ ಅಲೆಯುತ್ತಿದ್ದರು. ಸಿಂಧುತಾಯಿಯಂತೆಯೇ ಯಾರು ಇಲ್ಲದ ಮಕ್ಕಳು ರೈಲ್ವೇ ಸ್ಟೇಷನ್ನಲ್ಲಿ, ಬಸ್ಸ್ಟಾಂಡಿನಲ್ಲಿ ಭಿಕ್ಷೆ ಬೇಡುವುದನ್ನು ಕಂಡರೆ ಈಕೆಗೆ ಕರಳು ಕಿವುಚಿದಂತೆ ಆಗುತ್ತಿತ್ತು. ತಾನು ಭಿಕ್ಷೆ ಬೇಡಿ ಸಂಪಾದಿಸಿದ ಹಣವನ್ನು ಅಥವಾ ತಿನ್ನಿಸನ್ನು ಭಿಕ್ಷೆ ಬೇಡುವ ಮಕ್ಕಳಿಗೂ ನೀಡುತ್ತಾ ಬಂದರು..
ಅನಾಥ ಮಕ್ಕಳ ತಾಯಿ ಎನ್ನುವ ಕಾರಣಕ್ಕೆ ಅನುಕಂಪದಿಂದ ಜನರು ಸಿಂಧುತಾಯಿಗೆ ಹೆಚ್ಚು ಭಿಕ್ಷೆ ನೀಡುತ್ತಿದ್ದರು. ಈ ಸಮಯದಲ್ಲಿ ಸಿಂಧುತಾಯಿಗೆ ಮತ್ತು ಅನಾಥ ಮಕ್ಕಳ ನಡುವೆ ತಾಯಿ ಮಕ್ಕಳ ಅನುಬಂಧ ಗಟ್ಟಿಯಾಗಿತ್ತು. ಸಿಂಧುತಾಯಿಯೊಂದಿಗೆ ಹಸಿವು ಹಂಚಿಕೊಂಡಿದ್ದ ಅನಾಥ ಮಕ್ಕಳು ಇವರನ್ನು ಬಿಟ್ಟು ಹೋಗಲಿಲ್ಲ. ಈ ಮಕ್ಕಳಿಗಾಗಿ ಅವರು ಎಲ್ಲರ ನೆರವು ಪಡೆದು ಒಂದು ಸಂಸ್ಥೆಯನ್ನು ಆರಂಭಿಸಿದರು.ಪುಣೆಯ ಹಡಪ್ಸರ್ ಬಡಾವಣೆಯಲ್ಲಿ “ಸನ್ಮತಿ ಬಾಲನಿಕೇತನ”ಸಂಸ್ಥೆಯನ್ನು ಹುಟ್ಟು ಹಾಕಿದರು.
ಅನಾಥ ಮಕ್ಕಳಿಗಾಗಿ ತಲೆಯೆತ್ತಿದ ಒಂದು ಸಂಸ್ಥೆ ಇಂದು ಆರು ಸಂಸ್ಥೆಗಳಾಗಿ ಬೆಳೆದಿವೆ. ಅನಾಥೆಯಾಗಿದ್ದ ಸಿಂಧು ತಾಯಿಯೊಂದಿಗೆ ಕೆಲವೇ ಕೆಲವು ಮಕ್ಕಳು ಅಮ್ಮ ಎಂದು ಕರೆಯುತ್ತಾ ಸಿಂಧುತಾಯಿಯ ಜೊತೆಯಲ್ಲಿ ಜೀವನ ಸಾಗಿಸಿದರು. ಸಂಸ್ಥೆ ಆರಂಭವಾದಾಗ ಬೆರಳಣಿಕೆಯಷ್ಟು ಮಕ್ಕಳು ಮಾತ್ರ ಇದ್ರು. ಆದರೆ, ಈಗ 1400ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ಸಲಹುತ್ತಿದ್ದಾರೆ.
ಇದೀಗ ಸಿಂಧುತಾಯಿ 1400 ಅನಾಥ ಮಕ್ಕಳಿಗೆ ಮಹಾತಾಯಿಯಾಗಿದ್ದಾರೆ. ಅನಾಥ ಮಕ್ಕಳು ಎಲ್ಲಿಯೇ ಕಂಡು ಬಂದರೂ ಅವರನ್ನು ತನ್ನ ಸಂಸ್ಥೆಗೆ ಕರೆತಂದು ಸಾಕುತ್ತಾರೆ. ಮಕ್ಕಳನ್ನು ಪೋಷಣೆ ಮಾಡೋದು ಮಾತ್ರವಲ್ಲದೇ ಅವರಿಗೆ ಶಿಕ್ಷಣ , ಉದ್ಯೋಗ ಕಲ್ಪಿಸುವ ಕೆಲಸವನ್ನು ಸಹ ಮಾಡುತ್ತಿದ್ದಾರೆ. ಅನಾಥ ಮಕ್ಕಳ ಪಾಲಿನ ಮಹಾಮಾತೆ ಸಿಂಧುತಾಯಿ, ಇತರರಿಗೂ ಮಾದರಿಯಾಗಿದ್ದಾರೆ.