ಅಭಿನಯ ಚಕ್ರವರ್ತಿಗೆ ಹುಟ್ಟುಹಬ್ಬದ ಸಂಭ್ರಮ ..! ಅಭಿಮಾನಿಗಳ ಜೊತೆಗಿನ ಸೆಲೆಬ್ರೇಷನ್ಗೆ ಕೊವಿಡ್ ಅಡ್ಡಿ..!
ಸ್ಯಾಂಡಲ್ವುಡ್ ರನ್ನ ಕಿಚ್ಚ ಸುದೀಪ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳ ನೆಚ್ಚಿನ ಅಭಿನಯ ಚಕ್ರವರ್ತಿ 47ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಂದನವನದ ಚಂದು ಹುಟ್ಟುಹಬ್ಬ ಅಂದ್ರೆ ಅದು ಅಭಿಮಾನಿಗಳಿಗೆ ಹಬ್ಬ… ಪ್ರೀತಿಯಿಂದ ಮಾಣಿಕ್ಯನನ್ನು ಭೇಟಿ ಮಾಡಿ, ವಿಶ್ ಮಾಡಿ, ಫೋಟೋ ಕ್ಲಿಕ್ಕಿಸಿಕೊಂಡು ಹೋಗುವುದಕ್ಕೆ ಅಭಿಮಾನಿಗಳು ಕಾಯ್ತಿದ್ರು. ಆದ್ರೆ, ಈ ಬಾರಿ ಅಂಥಾ ಸಂಭ್ರಮವನ್ನು ಕೊರೋನಾ ಕಳೆಗುಂದಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಸ್ವತಃ ಸುದೀಪ್ ಅವರೇ ಅಭಿಮಾನಿಗಳಿಗೆ ಬರಬೇಡಿ ಅಂತ ಮನವಿ ಮಾಡಿದ್ದಾರೆ. ನಿಮ್ಮೊಡನೆ ಕಾಲ ಕಳೆಯುವುದು ನಂಗೂ ಬಹಳ ಖುಷಿ ವಿಚಾರ. ಅದಕ್ಕಿಂತ ಹೆಚ್ಚಿನ ಸಂತೋಷ ಖಂಡಿತವಾಗಿಯೂ ಬೇರೆಲ್ಲೂ ಸಿಗಲ್ಲ. ಆದರೆ ಕೊರೋನಾ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ನನಗೆ ನನ್ನ ನಿಮ್ಮ ಹಾಗೂ ನನ್ನ ಅಪ್ಪ-ಅಮ್ಮನ ಆರೋಗ್ಯ ಮುಖ್ಯ. ಅದನ್ನು ನಾನು ಗಮನದಲ್ಲಿಟ್ಟುಕೊಳ್ಳಬೇಕು. ಖಂಡಿತಾ ಹೇಳುತ್ತೇನೆ. ನಾವು ಸದ್ಯದಲ್ಲೇ ಒಟ್ಟಿಗೇ ಸೇರೋಣ. ಆ ದಿನ ಬರುತ್ತದೆ ಎಂದು ಸುದೀಪ್ ಟ್ವೀಟ್ ಮೂಲಕ ಅಭಿಮಾನಿಗಳಲ್ಲಿ ಮನತುಂಬಿ ಮನವಿ ಮಾಡಿದ್ದಾರೆ.
ತಮ್ಮ ಸುತ್ತಮುತ್ತಲಿನವರಿಗೆ ಕೈಲಾದ ಸಹಾಯ ಮಾಡಿ. ಅದರಿಂದ ಒಳ್ಳೆಯದಾಗುತ್ತದೆ ಎಂದು ಅಭಿಮಾನಿಗಳಿಗೆ ಸುದೀಪ್ ಈ ಸಂದರ್ಭದಲ್ಲಿ ಕಿವಿಮಾತು ಹೇಳಿದ್ದಾರೆ. ನಿಮ್ಮನ್ನು ಭೇಟಿಯಾಗುವುದು ನಂಗೆ ಸಂತೋಷವೇ. ಆದರೆ ಈಗ ಸಾಧ್ಯವಾಗುತ್ತಿಲ್ಲ ಎಂದು ರಿಕ್ವೆಸ್ಟ್ ಮಾಡಿದ್ದಾರೆ.
ಇನ್ನು ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಈಗಾಗಲೇ ಕಾಣೀ ಸ್ಟೂಡಿಯೋ ತಂಡ ಡಿಸೈನ್ ಮಾಡಿದ್ದ ಕಾಮನ್ ಡಿಪಿಯನ್ನು ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಬಿಡುಗಡೆ ಮಾಡಿದ್ದರು. ಆ ಡಿಪಿ ಹಾಗೂ ವಿವಿಧ ಅಭಿಮಾನಿಗಳು ಅಭಿಮಾನದಿಂದ ಮಾಡಿರುವ ವಿಶಸ್ ಪೋಸ್ಟರ್ ಎಲ್ಲೆಡೆ ಹರಿದಾಡುತ್ತಿದೆ.
ಇನ್ನು ಸುದೀಪ್ ಫ್ಯಾಂಟಮ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇಂದು ಸಂಜೆ ಹೈದರಾಬಾದ್ಗೆ ಹಿಂತಿರುಗಲಿದ್ದಾರೆ. ನಾಳೆಯಿಂದ ಚಿತ್ರೀಕರಣದಲ್ಲಿ ಪುನಃ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ತಾಯವ್ವ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಕಾಣಿಸಿಕೊಂಡ ಸುದೀಪ್ ನಾಯಕನಟನಾಗಿ ಮೊದಲು ಅಭಿನಯಿಸಿದ್ದು ಸ್ವರ್ಶ ಸಿನಿಮಾದಲ್ಲಿ. ಹುಚ್ಚ ಸಿನಿಮಾ ಅವರಿಗೆ ದೊಡ್ಡಮಟ್ಟಿನ ಬ್ರೇಕ್ ನೀಡಿತ್ತು. ಅಲ್ಲಿಂದ ಸೋಲು – ಗೆಲುವುಗಳನ್ನು ಕಾಣುತ್ತಾ ಇವತ್ತು ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಕನ್ನಡ ಮಾತ್ರವಲ್ಲದೆ ಟಾಲಿವುಡ್, ಬಾಲಿವುಡ್ನಲ್ಲೂ ಖದರ್ ತೋರಿಸಿದ್ದಾರೆ. ಇವರ ಪೈಲ್ವಾನ್ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಸದ್ಯ ಈ ಮೊದಲೇ ಹೇಳಿದಂತೆ ಫ್ಯಾಂಟಮ್ನಲ್ಲಿ ಬ್ಯುಸಿ ಇದ್ದಾರೆ. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಫ್ಯಾಂಟಮ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಸುದೀಪ್ ಸಿನಿಮಾ ಮಾತ್ರವಲ್ಲದೆ ರಿಯಾಲಿಟಿ ಶೋ ಹಾಗೂ ಕ್ರಿಕೆಟ್ ಸೇರಿದಂತೆ ನಾನಾ ರೀತಿಯಲ್ಲಿ ಬ್ಯುಸಿ ಇರುವ ಸಕಲಕಲಾ ವಲ್ಲಭ.. ಕನ್ನಡದ ಹೆಮ್ಮೆಯ ನಟನಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು.