ಅಹಮದಾಬಾದ್ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಮೋದಿ: ಗಾಯಾಳುಗಳ ಆರೋಗ್ಯ ವಿಚಾರಣೆ
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಆಗಮಿಸಿ, ಅಹಮದಾಬಾದ್ ವಿಮಾನ ಪತನ ದುರಂತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಹೌದು ಇಂದು ಬೆಳಗ್ಗೆ ಪ್ರಧಾನಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಅಲ್ಲಿಂದ ಮೇಘನಿನಗರ ಪ್ರದೇಶದಲ್ಲಿ ಸಂಭವಿಸಿದ ಅಪಘಾತ ಸ್ಥಳಕ್ಕೆ ನೇರವಾಗಿ ಕಾರಿನಲ್ಲೇ ತೆರಳಿದರು. ಇಲ್ಲಿ ಅಧಿಕಾರಿಗಳ ಬಳಿ ಘಟನೆ ಬಗ್ಗೆ ಮಾಹಿತಿ ಪಡೆದ ಮೋದಿ ಬಳಿಕ ಅಹಮದಾಬಾದ್ನ ಸಾರ್ವಜನಿಕ ಆಸ್ಪತ್ರೆಗೆ ತೆರಳಿದರು. ಅಲ್ಲಿ ವಿಮಾನ ದುರಂತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಅಲ್ಲಿಂದ ಏರ್ಪೋರ್ಟ್ನತ್ತ ತೆರಳಿದರು.
ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು, ಕೇಂದ್ರ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಮತ್ತು ರಾಜ್ಯ ಗೃಹ ಸಚಿವ ಹರ್ಷ ಸಾಂಘವಿ, ಇತರ ಭದ್ರತಾ ಅಧಿಕಾರಿಗಳು ಜೊತೆಗಿದ್ದರು.
ಇನ್ನೂ ದುರಂತದ ಬಗ್ಗೆ ನಿನ್ನೆ ಎಕ್ಸ್ ಪೋಸ್ಟ್ ಮೂಲಕ ಸಂತಾಪ ಸೂಚಿಸಿದ್ದ ಪ್ರಧಾನಿ ಮೋದಿ, ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ದುರಂತದಿಂದ ದಿಗ್ಭ್ರಮೆಗೊಂಡಿದ್ದೇನೆ. ಇದರಿಂದ ಎಲ್ಲರಿಗೂ ಅತೀವ ನೋವು ಉಂಟಾಗಿದೆ. ದುರಂತದಲ್ಲಿ ಸಿಲುಕಿರುವವರಿಗೆ ನೆರವು ನೀಡುವ ವಿಚಾರವಾಗಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅಲ್ಲದೇ ನಿರಂತರವಾಗಿ ಅವರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದರು.