ಆಪರೇಷನ್ ಸಿಂಧೂರ’ ಸಂಭ್ರಮಾಚರಣೆ ವೇಳೆ ಪಾಕ್ ಪರ ಘೋಷಣೆ: ಟೆಕ್ಕಿ ಬಂಧನ
ಬೆಂಗಳೂರು: ಕೆಲವೇ ದಿನಗಳ ಹಿಂದಷ್ಟೇ ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಪಾಕಿಸ್ತಾನದ ಪರ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿರುವುದು ಬೆಳಕಿಗೆ ಬಂದಿತ್ತು. ಇದೀಗ ವೈಟ್‌ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಆರೋಪ ಕೇಳಿಬಂದಿದೆ.
ಭಾರತೀಯ ಕಾರ್ಯಾಚರಣೆಯ ಯಶಸ್ಸನ್ನು ಮೇ 9ರಂದು ಪ್ರಶಾಂತ್ ಲೇಔಟ್‌ನಲ್ಲಿ ಯುವಕರು ಸಂಭ್ರಮಿಸುತ್ತಿದ್ದರು. ಈ ವೇಳೆ ಪಿ.ಜಿಯ ಬಾಲ್ಕನಿಯಲ್ಲಿ ನಿಂತಿದ್ದ ಶುಭಾಂಶು ಶುಕ್ಲಾ, ಪಾಕ್ ಪರ ಘೋಷಣೆ ಕೂಗಿದ್ದಾರೆ. ಪಾಕ್ ಪರ ಘೋಷಣೆ ಕೇಳಿ ಗಾಬರಿಗೊಂಡ ಯುವಕರು ಗಮನಿಸಿದಾಗ ಇಬ್ಬರು ಯುವಕರು ಕಟ್ಟಡವೊಂದರ ಬಾಲ್ಕನಿಯಲ್ಲಿ ನಿಂತು ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಸಹಾಯವಾಣಿಗೆ ಸ್ಥಳೀಯ ಯುವಕರು ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಧಾವಿಸಿದ ವೈಟ್‌ಫೀಲ್ಡ್ ಠಾಣೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಿಸಿದಾಗ ಶುಭಾಂಶು ಶುಕ್ಲಾ ಪಾಕ್ ಪರ ಘೋಷಣೆ ಕೂಗಿರುವುದು ಖಚಿತವಾಗಿದೆ. ಆರೋಪಿ ಶುಭಾಂಶು ಶುಕ್ಲಾ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದ, ಸದ್ಯ ಪ್ರಕರಣ ದಾಖಲಿಸಿಕೊಂಡು ಆತನನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.