ಇಡಿ ಇನ್ಮುಂದೆ ಕಾಂಗ್ರೆಸ್ ವಿರೋಧಿ ನಿರ್ದೇಶನಾಲಯ’ ಎಂದು ಬದಲಿಸಿಕೊಳ್ಳಲಿ: ದಿನೇಶ್ ಗುಂಡೂರಾವ್!
ಬೆಂಗಳೂರು:- ಇಡಿ ಇನ್ಮುಂದೆ ಕಾಂಗ್ರೆಸ್ ವಿರೋಧಿ ನಿರ್ದೇಶನಾಲಯ’ ಎಂದು ಬದಲಿಸಿಕೊಳ್ಳಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂಬಂಧ X ಮಾಡಿರುವ ಅವರು, ಕಾಂಗ್ರೆಸ್ ನಾಯಕರನ್ನೇ ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸುವ ‘ಜಾರಿ ನಿರ್ದೇಶನಾಲಯ’ ತನ್ನ ಹೆಸರನ್ನು ‘ಕಾಂಗ್ರೆಸ್ ವಿರೋಧಿ ನಿರ್ದೇಶನಾಲಯ’ ಎಂದು ಬದಲಾಯಿಸಿಕೊಳ್ಳುವುದು ಸೂಕ್ತ. ಯಾಕೆಂದರೆ ಜಾರಿ ನಿರ್ದೇಶನಾಲಯದ ಪ್ರೈಮ್ ಟಾರ್ಗೆಟ್ ಕಾಂಗ್ರೆಸ್ ನಾಯಕರೇ ಹೊರತು ಬಿಜೆಪಿಯವರಲ್ಲ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯ ಮತ್ತೆ ದಾಳಿ ನಡೆಸಿದೆ. ಜಾರಿ ನಿರ್ದೇಶನಾಲಯದ ವೈಶಿಷ್ಟ್ಯವೇನೆಂದರೆ ಅದು ದಾಳಿ ಮಾಡುವುದು ಬಿಜೆಪಿಯೇತರ ನಾಯಕರ ಮೇಲೆ ಮಾತ್ರ. ಇಲ್ಲಿಯವರೆಗೂ ಇಡಿ ಬಿಜೆಪಿ ನಾಯಕರ ತಂಟೆಗೆ ಹೋಗಿಲ್ಲ, ಹೋಗುವುದು ಇಲ್ಲ. ಇದೊಂದು ವಿಸ್ಮಯ.
ಇತ್ತೀಚೆಗಷ್ಟೆ ತಮಿಳುನಾಡಿನ ಟಿಎಎಸ್‌ಎಂಎಸಿ ಹಗರಣದಲ್ಲಿ ಇಡಿ ನಡೆಯನ್ನು ಸುಪ್ರೀಂ ಕೋರ್ಟ್ ಕಟು ಮಾತುಗಳಲ್ಲಿ ಟೀಕಿಸಿದೆ. ಇಡಿ ಎಲ್ಲಾ ಮಿತಿಗಳನ್ನು ಮೀರುತ್ತಿದೆ ಎಂದು ಸುಪ್ರೀಂ ಎಚ್ಚರಿಕೆ ನೀಡಿದೆ. ಆದರೂ ಇಡಿ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ.
ಸಾಂವಿಧಾನಿಕ ತನಿಖಾ ಸಂಸ್ಥೆಯಾದ ಇಡಿಯನ್ನು ಮೋದಿ ಸರ್ಕಾರ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಇಡಿ ರಾಜಕೀಯ ಪಕ್ಷವೊಂದರ ಆಜ್ಞಾಪಾಲಕರಾದರೆ ಆ ಸಂಸ್ಥೆಗೆ ಸಾಂವಿಧಾನಿಕ ಪಾವಿತ್ರ‍್ಯತೆ ಇರಲು ಹೇಗೆ ಸಾಧ್ಯ? ಆ ಸಂಸ್ಥೆಯಿಂದ ಪ್ರಜಾಪ್ರಭುತ್ವದ ಮೌಲ್ಯ ಉಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.