ಇಡೀ ದೇಶವೇ ಕೊಂಡಾಡುತ್ತಿರುವ ಮಾದರಿ ಜಿಲ್ಲಾಧಿಕಾರಿ
ನಾವು ಇನ್ನೊಬ್ಬರಿಗೆ ಮಾದರಿಯಾಗಬೇಕು ಅಂದ್ರೆ ನಾವು ಅಂತಹ ಕೆಲಸಗಳನ್ನು ಮಾಡಬೇಕು. ಇದಕ್ಕೆ ಉತ್ತಮ ನಿದರ್ಶನ ಛತ್ತಿಸಗಡದ ಕಬಿರ್ ಧಾಮ್ ಜಿಲ್ಲೆಯ ಜಿಲ್ಲಾಧಿಕಾರಿ ಅವಿನಾಶ್ ಶರಣ್ ಅವರು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾದ ಅವಿನಾಶ್ ಅವರು ಸರಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ ಎಂದು ಸಾಲು ಸಾಲು ಭಾಷಣ ಕೊಟ್ಟು ಹೊರಡುವ ಬಹುತೇಕರಿಗೆ ಆದರ್ಶರಾಗಿದ್ದಾರೆ.
ಅದೂ ಅಲ್ಲದೇ ಸರಕಾರಿ ಶಾಲೆಗಳಲ್ಲಿ ಒಳ್ಳೆಯ ಶಿಕ್ಷಣ ನೀಡುವುದಿಲ್ಲ. ಹಾಗಾಗಿ ಕಷ್ಟವೋ ಸುಖವೋ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು ಎಂದು ಪ್ರತಿ ಪೋಷಕರೂ ಆಸೆ ಪಡುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಈ ಐಎಎಸ್ ಅಧಿಕಾರಿ ಅವಿನಾಶ್ ಶರಣ್, ಇನ್ನೊಬ್ಬರಿಗೆ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಎಂದು ಹೇಳುವುದರ ಜೊತೆಗೆ ತಮ್ಮ ಮಗಳನ್ನೂ ಸರಕಾರಿ ಶಾಲೆಗೇ ಸೇರಿಸಿ ಮಾದರಿಯಾಗಿದ್ದಾರೆ.
ಛತ್ತೀಸ್ಗಡ್ ದ ಈ ಐಎಎಸ್ ಅಧಿಕಾರಿ ಅವಿನಾಶ್ ಶರಣ್, ಸಮಾಜಮುಖಿ ಅಧಿಕಾರಿ. ಬಡವರ ಮತ್ತು ದೀನದಲಿತರ ಕಂಡರೇ ಅಪಾರ ಪ್ರೇಮ. ಅದರಲ್ಲೂ ಬಡವರ ಮಕ್ಕಳು ಕಂಡರೆ ಎಲ್ಲಿಲ್ಲದ ಅಕ್ಕರೆ. ಹಾಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿಯೂ ಸರಕಾರಿ ಶಾಲೆಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಅವಶ್ಯವಾದ ಹತ್ತಾರು ಕ್ರಮಗಳನ್ನು ಕೈಗೊಂಡಿದ್ದಾರೆ.
ಇನ್ನು ಮಗಳು ಓದುತ್ತಿರುವ ಸ್ಥಳೀಯ ಸರಕಾರಿ ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಿನಾಶ್ ಶರಣ್ ಅವರು ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಒಬ್ಬ ಐಎಎಸ್ ಆಫೀಸರ್ ತನ್ನ ಮಗಳನ್ನು ಸರಕಾರಿ ಶಾಲೆಗೆ ಸೇರಿಸುತ್ತಾರೆ, ಎಂದರೆ ಅದು ಮಾಮೂಲಿ ಮಾತಲ್ಲ. ಇದು ಸಾಧ್ಯವಾಗಿದ್ದೇ ತಡ ಸುತ್ತಲಿನ ಸಾಮಾನ್ಯ ಜನರಲ್ಲೂ ನಾವೂ ಕೂಡ ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಸರಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ನಿರ್ಧಾರ ಮಾಡಿದ್ದಾರೆ.
ನೋಡಿ, ಇದರ ಪರಿಣಾಮವಾಗಿಯೇ ಶಾಲೆಯ ದಾಖಲಾತಿಯಲ್ಲಿ ಗಣನೀಯ ಏರಿಕೆ ದಾಖಲಾಗಿದೆ. ಇದರ ಜೊತೆಗೆ ಶಾಲೆಯ ಆಡಳಿತ ಮಂಡಳಿಗೂ ಇದರಿಂದ ಉತ್ಸಾಹ ಹೆಚ್ಚಾಗಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ಇಲ್ಲಿ ಐಎಎಸ್ ಅಧಿಕಾರಿ ಮಗಳಿಗೆ ಒಂದು ರೀತಿ ಪಾಠ ಮಾಡುತ್ತಿಲ್ಲ, ಬಡವರಿಗೆ ಮತ್ತೊಂದು ರೀತಿ ಪಾಠವಿಲ್ಲ. ಏಕರೀತಿ ಪ್ರಕ್ರಿಯೆ ಇಲ್ಲಿ. ಮಧ್ಯಾಹ್ನದ ಬಿಸಿಯೂಟವನ್ನು ಕೂಡ ಎಲ್ಲರ ಮಕ್ಕಳಂತೆಯೇ ಜಿಲ್ಲಾಧಿಕಾರಿ ಶರಣ್ ಮಗಳು ಸಹ ಸಾಲಿನಲ್ಲಿ ಕುಳಿತು ಊಟ ಮಾಡುತ್ತಾಳೆ.
ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿಯಷ್ಟೇ ಅಲ್ಲ. ಈ ಜಿಲ್ಲಾಧಿಕಾರಿ ಅವಿನಾಶ್ ಶರಣ್ ಅವರಿಗೆ. ಬಡವರಿಗೆ ವಸತಿ, ಆರೋಗ್ಯದ ಬಗ್ಗೆಯೂ ಕಾಳಜಿವುಳ್ಳರಾಗಿದ್ದಾರೆ. ಬಡವರಿಗೆ ಯಾರಿಂದಲೂ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವುದೇ ಶಪಥದ ಮಾತು. ಗ್ರಾಮ ವಾಸ್ತವ್ಯ ಮಾಡುತ್ತಾರೆ. ಹಳ್ಳಿಗರ ಕಷ್ಟಸುಖಗಳನ್ನು ಅರಿಯುತ್ತಾರೆ. ಖುದ್ದು ಭೇಟಿ ನೀಡಿ, ಕುಡಿಯುವ ನೀರು, ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ, ಜನರಿಂದ ಶಹಭಾಷ್ ಗಿರಿ ಪಡೆದಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಿ, ಮುಖ್ಯಮಂತ್ರಿಯಗಳಿಂದ ಮೆಚ್ಚುಗೆ ಪಡೆದಿದ್ದಾರೆ .
ಏನೇ ಹೇಳಿ, ಸಾಮಾಜಿಕವಾಗಿ ಬದಲಾವಣೆ ಸಾಧ್ಯವಾಗಬೇಕಾದರೆ ನಾವು ಮೊದಲು ಹೆಜ್ಜೆ ಇಡಬೇಕು. ಉನ್ನತ ಹುದ್ದೆಯಲ್ಲಿರುವವರು ಹೀಗೆ ಮಾದರಿ ಕಾರ್ಯ ಮಾಡಿದರೆ ಅದು ಬೇಗನೇ ಪರಿಣಾಮಕಾರಿಯಾಗುತ್ತದೆ ಎನ್ನುವುದಕ್ಕೆ ದೂರದ ಛತ್ತೀಸ್ಗಡ್ನ ಈ ಮಾದರಿ ಐಎಎಸ್ ಅಧಿಕಾರಿ ಅವಿನಾಶ್ ಶರಣ್ ಅವರೇ ನಿದರ್ಶನ. ಇವರಿಗೆ ನಮ್ಮೆಲ್ಲರದೂ ಒಂದು ಸಲಾಂ .