ಇದು ಮೊದಲ ಬಾರಿ ತಾಯಿ ಆದವರಿಗಾಗಿ
ಮೊದಲ ಬಾರಿ ತಾಯಿ ಆದಾಗ ಮಹಿಳೆಯರಲ್ಲಿ ಅನೇಕ ಆತಂಕಗಳು ಮನೆ ಮಾಡಿರುತ್ತವೆ. ಮಗುವಿನ ಪಾಲನೆ-ಪೋಷಣೆ ಅವರಿಗೆ ಚಿಂತೆ. ಇದಕ್ಕೆ ಇಲ್ಲಿ ಒಂದಿಷ್ಟು ಟಿಪ್ಸ್ ಇದೆ.
ಬಿಡುವಿನ ವೇಳೆಯ ಸದ್ಬಳಕೆ : ಮಗುವಿಗೆ ಹಾಲುಣಿಸುವುದು, ಸ್ನಾನ ಮಾಡಿಸುವುದು ಮತ್ತು ಒದ್ದೆ ಬಟ್ಟೆಗಳನ್ನು ಬದಲಾಯಿಸುವುದು ಮುಂತಾದ ಕೆಲಸಗಳನ್ನು ಮಾಡಿದ ನಂತರ ಬಿಡುವಿದ್ದಾಗ ಐದು ನಿಮಿಷಗಳ ಕಾಲ ನಿಮ್ಮ ಉಸಿರಾಟದ ಮೇಲೆ ಗಮನ ಕೊಡಿ. ಮೂಗಿನ ಮೂಲಕ ದೀರ್ಘವಾದ ಉಸಿರನ್ನು ಒಳಗೆಳೆದುಕೊಂಡು ಬಾಯಿಯ ಮೂಲಕ ಹೊರಗೆ ಬಿಡಿ. ಇದರಿಂದ ನೀವು ಎದುರಿಸುತ್ತಿರುವ ಕಿರಿಕಿರಿ ಮತ್ತು ಆತಂಕಗಳು ತಕ್ಷಣ ದೂರವಾಗುತ್ತವೆ.
ಮಕ್ಕಳು ಅತ್ತಾಗ ಹೆದರ ಬೇಡಿ : ನವಜಾತ ಶಿಶುವಿಗೆ ಗೊತ್ತಿರುವ ಒಂದೇ ಒಂದು ಭಾಷೆಯೆಂದರೆ ಅಳು. ಆದ್ದರಿಂದ ಹಾಲುಣಿಸುವಾಗ, ಬಟ್ಟೆ ಬದಲಾಯಿಸುವಾಗ ಅಥವಾ ಕಾರಣವಿಲ್ಲದೆ ಮಗು ಅತ್ತಾಗ ಭಯಪಡಬೇಡಿ. ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಸಮಾಧಾನಗೊಳಿಸಿ. ಶಾಂತತೆಯು ಮಕ್ಕಳನ್ನು ಸುಮ್ಮನಾಗಿಸಬಹುದು.
ಫೋನ್‌ನಿಂದ ದೂರವಿರಿ : ಪ್ರತಿದಿನ ಕನಿಷ್ಠ ಎರಡು ಗಂಟೆಗಳ ಕಾಲ ಫೇಸ್ಬುಕ್ ಅಪ್‌ಡೇಟ್‌ಗಳು, ಲ್ಯಾಪ್‌ಟಾಪ್‌ನಲ್ಲಿ ಬಾಕಿಯುಳಿದಿರುವ ಕೆಲಸಗಳು, ಸೆಲ್‌ಫೋನ್ ಕರೆಗಳು ಮತ್ತು ಕುತೂಹಲ ಹುಟ್ಟಿಸುವ ಪುಸ್ತಕಗಳಿಂದ ದೂರವಿರಿ. ಆ ಸಮಯವನ್ನು ನಿಮ್ಮ ಮಗುವಿಗೆ ಮೀಸಲಿಡಿ. ಅದರ ನಗು ಮತ್ತು ತೊದಲು ಮಾತುಗಳನ್ನು ಆಲಿಸಿ ಸಂತೋಷಪಡಿ.
ಗಡಿ ಬಿಡಿ ಬೇಡ: ಯಾವುದೇ ವಿಷಯಕ್ಕೂ ಸರಿ ಗಡಿಬಿಡಿ ಮಾಡಬೇಡಿ. ನೀವು ಈಗಷ್ಟೇ ತಾಯಿಯಾಗಿದ್ದೀರಿ. ಗಾಯ ಮಾಯದೇ ಇರಬಹುದು. ಆದುದರಿಂದ ಎಲ್ಲಾ ವಿಷಯದಲ್ಲೂ ತುಂಬಾ ನಿಧಾನವಾಗಿರಿ. ಇದರಿಂದ ನಿಮಗೂ ನಿಮ್ಮ ಮಗುವಿಗೂ ಒಳಿತು.
ಸರಿಯಾಗಿ ಆಹಾರ ಸೇವನೆ ಮಾಡಿ : ಮಗುವಿಗೆ ಹಾಲು ನೀಡಲು ಸರಿಯಾಗಿ ಆಹಾರ ಸೇವನೆ ಮಾಡಬೇಕೆಂದು ಹೊಟ್ಟೆ ಬಿರಿಯುವಂತೆ ತಿನ್ನಬೇಡಿ. ಬದಲಾಗಿ ನಿಯಮಿತಕ್ಕಿಂತ ಸ್ವಲ್ಪ ಹೆಚ್ಚಾಗಿ ಆಹಾರ ಸೇವನೆ ಮಾಡಿ. ಅದರಲ್ಲೂ ಲಿಕ್ವಿಡ್ ಹಾಗೂ ಹಣ್ಣು ಹಂಪಲುಗಳ ಸೇವನೆ ಹೆಚ್ಚಿಸಿ.
ಮಗುವನ್ನು ಎತ್ತುವ ಮುನ್ನ ಕೈ ತೊಳೆಯಿರಿ : ಶಿಶುವನ್ನು ಎತ್ತುವುದಕ್ಕಿಂತ ಮುಂಚೆ ನಿಮ್ಮ ಕೈಗಳನ್ನು ಶುಭ್ರವಾಗಿ ತೊಳೆದುಕೊಳ್ಳಿ ಅಥವಾ ಒರೆಸಿಕೊಳ್ಳಿ. ಏಕೆಂದರೆ ನವಜಾತ ಶಿಶುವಿಗೆ ಇನ್ನೂ ರೋಗ ನಿರೋಧಕ ಶಕ್ತಿ ಬಂದಿರುವುದಿಲ್ಲ ಆದ್ದರಿಂದ ಬಹಳ ಬೇಗ ಇನ್ಫೆಕ್ಷನ್ ಆಗಬಹುದು.
ಮಗುವನ್ನು ಎತ್ತಿಕೊಳ್ಳುವ ರೀತಿ : ಶಿಶುವನ್ನು ಎತ್ತಿಕೊಳ್ಳುವ ರೀತಿ ಕೂಡ ಮಹತ್ವದ್ದು. ಶಿಶುವು ದೈಹಿಕವಾಗಿ ಬಲಿಷ್ಟವಾಗಿರುವುದಿಲ್ಲ ಆದುದರಿಂದ ಅದರ ಕುತ್ತಿಗೆ ಮತ್ತು ತಲೆಗೆ ಸರಿಯಾದ ಆಸರೆ ಕೊಟ್ಟು ಮೃದುವಾಗಿ ಎತ್ತಿಕೊಳ್ಳಿ.
ಮಗುವನ್ನು ಎಚ್ಚರಿಸಲು ಹೀಗೆ ಮಾಡಿ : ಶಿಶು ಮಲಗಿರುವಾಗ ಎಬ್ಬಿಸಲು, ಕಾಲು ಅಲ್ಲಾಡಿಸುವುದರ ಬದಲು ಅದರ ಕೆನ್ನೆಯ ಮೇಲೆ ಮೆಲ್ಲಗೆ ಉಸಿರು ಬಿಡಿ.ಇದರಿಂದ ಮಗುವಿಗೆ ಬೇಗನೆ ಎಚ್ಚರವಾಗುತ್ತದೆ.
ಸ್ನಾನ ಮಾಡಿಸುವುದು : ಮಗುವಿಗೆ ಸ್ನಾನ ಮಾಡಿಸುವಾಗ ತುಂಬಾ ಜಾಗರೂಕರಾಗಿರಬೇಕು. ಹೆಚ್ಚು ಬಿಸಿ ಅಲ್ಲದ ಉಗುರು ಬೆಚ್ಚಗಿನ ನೀರನ್ನು ಬಳಸಿ. ಮಗುವಿಗೆ ಸ್ನಾನ ಮಾಡಿಸುವ ಮುನ್ನ ನೀವು ನೀರು ಎಷ್ಟು ಬಿಸಿ ಇದೆ ಎಂಬುದನ್ನು ನೋಡಿ. ಸೂಕ್ಷ್ಮ ಭಾಗಗಳನ್ನು ಸ್ಪಾಂಜ್ ಮೂಲಕ ಉಜ್ಜಿ. ಕೆಮಿಕಲ್ ರಹಿತ ಸೋಪ್ ಅಥವಾ ಶ್ಯಾಂಪೂ ಬಳಕೆ ಮಾಡಿ.