ಬೆಂಗಳೂರು: ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್ ಅನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ವಾಗತಿಸಿದ್ದಾರೆ. ಕೃಷಿ ವಲಯ ಮತ್ತು ಕೃಷಿಧಾನ್ಯಗಳ ಬೆಳೆಗೆ ಉತ್ತೇಜನ, ಉದ್ಯೋಗ ಸೃಷ್ಟಿ, ಯುವ ಉದ್ಯಮಿಗಳಿಗೆ ಪ್ರೋತ್ಸಾಹ, ಉತ್ಪಾದನೆಗೆ ಒತ್ತು ಇತ್ಯಾದಿ ಕಮಗಳು ಸ್ವಾಗತಾರ್ಹ ಎಂದಿರುವ ಅವರು, ದೇಶೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಕಲ್ಪ ಮಾಡಿ ಲಕ್ಷದ್ವೀಪ ಸೇರಿ ರಾಜ್ಯದ ಕರಾವಳಿ ಪ್ರವಾಸೋದ್ಯಮದ ಬೆಳವಣಿಗೆಗೆ ಮನ್ನಣೆ ಹಾಕಲಾಗಿದೆ ಎಂದಿದ್ದಾರೆ.
ಇದೊಂದು ಜನಪರ, ಅಭಿವೃದ್ಧಿಪರ ಹಾಗೂ ವಿಕಾಸಪೂರಕ ಬಜೆಟ್. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಈ ಆಯವ್ಯಯದಲ್ಲಿ ಅಡಗಿದೆ. ಹಿಂದಿನ ಐದು ವರ್ಷದ ಆಡಳಿತದಲ್ಲಿ ಯಾವ ಯಾವ ವಲಯಕ್ಕೆ ಶಕ್ತಿ ತುಂಬಿದ್ದೇವೆ ಅನ್ನುವ ಮಾಹಿತಿಯನ್ನು ಹಣಕಾಸು ಸಚಿವರು ನೀಡಿದ್ದಾರೆ. ಯುವಜನತೆ ಸೇರಿ ಹಲವು ವರ್ಗಕ್ಕೆ ಹೆಚ್ಚಿನ ಆರ್ಥಿಕ ಶಕ್ತಿ ನೀಡುವ ಭರವಸೆ ನೀಡಿದ್ದಾರೆ. ಉತ್ಪಾದನಾ ಕ್ಷೇತ್ರದ ಓಟಕ್ಕೆ ಇಂಬು ಕೊಡಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.