ಶಕುಂತಲಾ ಭಂಡಾರಕರ್. ಲೆಫ್ಟಿನೆಂಟ್ ಕರ್ನಲ್ ಆಗಿದ್ದ ಅಜಿತ್ ಕುಮಾರ್ ಭಂಡಾರಕರ್ ಅವರ ಪತ್ನಿ. ಕಾರ್ಗಿಲ್ ಯುದ್ಧದಲ್ಲಿ ಪತಿ ಅಜಿತ್ ಭಂಡಾರಕರ್ ಅವರನ್ನು ಕಳೆದುಕೊಂಡಾಗ ಇಬ್ಬರು ಗಂಡು ಮಕ್ಕಳು ಹಾಲುಗಲ್ಲದವರು. ಪತಿಯ ನೆನಪಿನಲ್ಲೇ ಜೀವನದ ದೋಣಿಯನ್ನು ಮುಂದೆ ಸಾಗಿಸುತ್ತ ಮಕ್ಕಳಲ್ಲಿ ರಾಷ್ಟ್ರಭಕ್ತಿ, ಸ್ಥೈರ್ಯದಂಥ ಮೌಲ್ಯಗಳನ್ನು ಬಿತ್ತಿ ಇಬ್ಬರು ಮಕ್ಕಳನ್ನೂ ರಾಷ್ಟ್ರ ಸೇವೆಗೆ ಸಮರ್ಪಿಸಿದ್ದಾರೆ.
ಶಕುಂತಲಾ ಭಂಡಾರಕರ್ ಅವರ ಇಬ್ಬರೂ ಪುತ್ರರು ಸೇನೆಗೆ ಸೇರಿ ತಂದೆಯಂತೆ ದೇಶರಕ್ಷಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದ ಅಜಿತ್ ಭಂಡಾರಕರ್ ಪುಣೆ, ಇಂದೋರ್, ಸಿಕ್ಕಿಂ, ತಮಿಳುನಾಡು, ದೆಹಲಿ ಮುಂತಾದೆಡೆ ಕಾರ್ಯನಿರ್ವಹಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ನಿಯೋಜಿತರಾಗಿದ್ದರು.
ಅಜಿತ್ ಭಂಡಾರಕರ್ ಶೌರ್ಯ ಮತ್ತು ಸಾಹಸ ಕಂಡು, ಭಾರತೀಯ ಸೇನೆ 1999ರ ಕಾರ್ಗಿಲ್ ಯುದ್ಧದ ವೇಳೆ ಅವರನ್ನು ಆಪರೇಷನ್ ರಕ್ಷಕ ಹಾಗೂ ಆಪರೇಷನ್ ವಿಜಯ್ ತಂಡದ ಸದಸ್ಯರಾಗಿ ನಿಯೋಜಿಲ್ಪಟ್ಟಿದ್ದರು. ಆದರೆ, ಎದುರಾಳಿ ಪಾಕ್ ಸೇನೆಯೊಂದಿಗೆ ಸೆಣಸಾಡುತ್ತ 1999ರ ಅಕ್ಟೋಬರ್ 31ರಂದು ಅಜಿತ್ ವೀರಮರಣವನ್ನಪ್ಪಿದ್ದರು.
ವೀರ ಮರಣವನ್ನಪ್ಪಿದ ಹಿಂದಿನ ದಿನವಷ್ಟೇ ಅಕ್ಟೋಬರ್30ರಂದು ಫೋನಿನಲ್ಲಿ ಅಜಿತ್ ಭಂಡಾರಕರ್ ಅವರೊಂದಿಗೆ ಮಾತನಾಡಿದ್ದ ಶಕುಂತಲಾ ಅವರಿಗೆ ಪತಿ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಅದರಿಂದ ಸಾವರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತಾದರೂ ಮಕ್ಕಳನ್ನು ಅವರ ದಾರಿಯಲ್ಲೇ ಬೆಳೆಸಲು ನಿರ್ಧರಿಸಿದ ಶಕುಂತಲಾ ಕುಟುಂಬ ನಿರ್ವಹಣೆಯ ನೊಗ ಹೊತ್ತರು. ಅಜಿತ್ ಭಂಡಾರಕರ್ ಅವರ ಹೋರಾಟವನ್ನು ಗೌರವಿಸಿ ಸರ್ಕಾರ 2000ರಲ್ಲಿ ಶೌರ್ಯ ಚಕ್ರ ಪ್ರದಾನ ಮಾಡಿತು.
ಬೆಂಗಳೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ, ಕೌನ್ಸಲರ್ ಆಗಿ ಕಾರ್ಯನಿರ್ವಹಿಸುತ್ತ ಅಲ್ಲಿನ ಮಕ್ಕಳಲ್ಲೂ ರಾಷ್ಟ್ರಭಕ್ತಿಯ ಕೆಚ್ಚು ತುಂಬಿದರು. ಪುತ್ರ ನಿರ್ಭಯ್ ಭಂಡಾರಕರ್ ತಂದೆ ಸೇವೆ ಸಲ್ಲಿಸಿದ್ದ 18 ಮದ್ರಾಸ- ಮೈಸೂರು ರೆಜಿಮೆಂಟ್ನಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೋರ್ವ ಪುತ್ರ ಅಕ್ಷಯ್ 6 ತಿಂಗಳ ಹಿಂದೆ ಸೇನೆಗೆ ಸೇರಿ ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಹುತಾತ್ಮ ಕರ್ನಲ್ ವಸಂತ್ ಅವರ ಪತ್ನಿ ಸುಭಾಷಿಣಿ ವಸಂತ್ ಅವರ ‘ವಸಂತರತ್ನ ಕಲಾ ಫೌಂಡೇಷನ್’ನ್ಗೆ ನೆರವು ನೀಡುತ್ತಿರುವ ಶಕುಂತಲಾ ಭಂಡಾರಕರ್, ಯೋಧರ ವಿಧವೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ.ಯೋಧರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವಾಗುತ್ತ, ಅವರನ್ನು ಕೂಡ ತಮ್ಮ ಮಕ್ಕಳಂತೆ ಸೇನೆಗೆ ಸೇರುವಂತೆ ಹುರಿದುಂಬಿಸುತ್ತಿದ್ದಾರೆ.
ಏನೇಹೇಳಿ. ವೀರ ಸೇನಾನಿ ಪತ್ನಿ ಶಕುಂತಲಾ ಭಂಡಾರಕರ್ ಅವರಿಗಿರುವ ರಾಷ್ಟ್ರಭಕ್ತಿ, ತಂದೆಯಂತೆ ಮಕ್ಕಳನ್ನು ವೀರ ಸೇನಾನಿಗಳಾಗಲು ರಾಷ್ಟ್ರಕ್ಕೆ ಸಮರ್ಪಿಸಿಕೊಂಡಿರುವುದು ನಿಜಕ್ಕೂ ಸ್ಫೂರ್ತಿದಾಯಕ.