ಕೊರೊನಾ ವೈರಾಣು ಬಂದ ಮೇಲೆ ಜನರ ಜೀವನ ಶೈಲಿ ಮತ್ತು ಆಹಾರ ಶೈಲಿ ಎರಡು ಸಹ ಬದಲಾಗಿದೆ. ಅದರಲ್ಲೂ ಜನರಂತೂ ಆಹಾರ ವಿಚಾರದಲ್ಲಿ ತೀರಾ ಎಚ್ಚರಿಕೆ ವಹಿಸುತ್ತಿದ್ದಾರೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.
ಇನ್ನು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕೂಡ ಕೊರೊನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಸೂಚಿಸಿದೆ. ಅದರಲ್ಲೂ ಹೆಚ್ಚಾಗಿ ವಿಟಮಿನ್ ಸಿ ಇರುವ ಆಹಾರಗಳನ್ನು ತಿನ್ನುವಂತೆ ಸಲಹೆ ನೀಡಿದೆ.
ವಿಟಮಿನ್ ಸಿ ಆಹಾರಗಳು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ವಿಟಮಿನ್ ಸಿ ಅಧಿಕವಿರುವ ಆಹಾರಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ತ್ವಚೆ ಕೂಡ ಸುಂದರವಾಗಿರುತ್ತದೆ ಎಂದಿದೆ.
ನೆಲ್ಲಿಕಾಯಿಯಲ್ಲಿ ಅನೇಕ ಆರೋಗ್ಯವರ್ಧಕ ಗುಣಗಳಿವೆ. ನೆಲ್ಲಿಕಾಯಿ ತಿನ್ನುವುದರಿಂದ ರಕ್ತ ಶುದ್ಧವಾಗುವುದು, ಅಲ್ಲದೆ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗುವುದು ಎಂದು 2020ರಲ್ಲಿ
ಕಾಂಟೆಪೊರರಿ ಕ್ಲೀನಿಕಲ್ ಟ್ರೈಯಲ್ ಕಮ್ಯುನಿಕೇಶನ್ಸ್ ಜರ್ನಲ್ ನಲ್ಲಿ ಪ್ರಕಟವಾದ ವರದಿ ಹೇಳಿದೆ.
ದಿನದಲ್ಲಿ ಒಂದು ನೆಲ್ಲಿಕಾಯಿ ತಿನ್ನಬಹುದು. ಇಲ್ಲವೇ ಆಮ್ಲ ಜ್ಯೂಸ್ ಕೂಡ ಕುಡಿಯಬಹುದು. ನೆಲ್ಲಿಕಾಯಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಕೂದಲು ಉದುರುವ ಸಮಸ್ಯೆ ಕೂಡ ಕಡಿಮೆಯಾಗುವುದು.
ಇನ್ನೂ ಕಿತ್ತಳೆಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಪ್ರಮಾಣ ಕಡಿಮೆಯಿದೆ. ಇದರ ಜೊತೆಗೆ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ ಕಿತ್ತಳೆಹಣ್ಣು.
ಇದರಲ್ಲಿ ನಾರಿನಂಶ, ವಿಟಮಿನ್ಸ್, ಫೋಲೆಟ್, ಪೊಟಾಷ್ಯಿಯಂ ಅಧಿಕವಿದೆ. ಕಿತ್ತಳೆಯಲ್ಲಿರುವ ವಿಟಮಿನ್ ಸಿ ದೇಹವನ್ನು ಇತರ ರೋಗಗಳಿಂದ ರಕ್ಷಣೆ ಮಾಡುತ್ತದೆ. ಕಿತ್ತಳೆಯನ್ನು ಸಹ ಹಾಗೆಯೇ ತಿನ್ನಬಹುದು, ಇಲ್ಲಾ ಜ್ಯೂಸ್ ಮಾಡಿ ಕುಡಿಯಬಹುದು.ಕಿತ್ತಳೆಯಷ್ಟೇ ಪಪ್ಪಾಯಿ ಕೂಡ ತುಂಬಾ ಆರೋಗ್ಯಕರ. ಇದು ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುತ್ತದೆ. ಇನ್ನು ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಪಪ್ಪಾಯಿ ತಿನ್ನುವುದರಿಂದ ತ್ವಚೆ ಕೂಡ ಚೆನ್ನಾಗಿರುತ್ತದೆ. ಬೆಳಗ್ಗೆ ಒಂದು ಬೌಲ್ ಪಪ್ಪಾಯಿ ಹಣ್ಣು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ ಅಧಿಕವಿದೆ. ಅಲ್ಲದೆ ಇದರಲ್ಲಿ ಆ್ಯಂಟಿಆಕ್ಸಿಡೆಂಟ್, ಕ್ಯಾಪ್ಸಿಕಂ, ವಿಟಮಿನ್ ಇ, ವಿಟಮನ್ ಎ, ನಾರಿನಂಶ, ಖನಿಜಾಂಶ, ಫೋಲೆಟ್, ಪೊಟಾಷ್ಯಿಯಂ ಅಂಶವಿದೆ. ಕ್ಯಾಪ್ಸಿಕಂ ರಕ್ತಹೀನತೆ ತಡೆಗಟ್ಟುತ್ತದೆ. ಅಲ್ಲದೆ ಇದರಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿದ್ದು, ಇದು ಆಹಾರದಲ್ಲಿರುವ ಕಬ್ಬಿಣದಂಶವನ್ನು ನಮ್ಮ ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ನಿಮ್ಮ ಆಹಾರದಲ್ಲಿ ಸೀಬೆಕಾಯಿ ತಪ್ಪದೇ ಸೇರಿಸಿ, ಏಕೆಂದರೆ ಸೀಬೆಕಾಯಿ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುವಲ್ಲಿ ತುಂಬಾನೇ ಸಹಕಾರಿ. ಅಲ್ಲದೆ ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಹೃದಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ಪೊಟಾಷ್ಯಿಯಂ ಹಾಗೂ ನಾರಿನಂಶವಿದೆ. ಆದ್ದರಿಂದ ಮುಟ್ಟಿನ ನೋವು ಕಡಿಮೆ ಮಾಡುವಲ್ಲಿ ಕೂಡ ಸೀಬೆಕಾಯಿ ಪರಿಣಾಮಕಾರಿಯಾಗಿದೆ.
ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿಯುವ ಅಭ್ಯಾಸ ತುಂಬಾನೇ ಒಳ್ಳೆಯದು. ಇದರಿಂದ ತೂಕ ನಿಯಂತ್ರಣವಾಗುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುವುದು. ನಿಂಬೆರಸ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಜೀರ್ಣಕ್ರಿಯೆಗೆ ಸಹಕಾರಿ. ಅಲ್ಲದೆ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ತಡಗಟ್ಟುವಲ್ಲಿಯೂ ಸಹಕಾರಿ. ನಿಂಬೆರಸ ದೇಹದಲ್ಲಿ ಪಿಹೆಚ್ ಪ್ರಮಾಣ ನಿಯಂತ್ರಣದಲ್ಲಿಡುತ್ತದೆ.