ಕಾಂಗ್ರೆಸ್ ನಾಯಕರಾದ ವಿ.ಎಸ್. ಉಗ್ರಪ್ಪ ಹಾಗೂ ಎಂ.ಎ. ಸಲೀಂ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುರಿತು ಮಾತನಾಡಿದ್ದ ಅವಹೇಳನಕಾರಿ ಮಾತುಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ಮಧ್ಯದ ಕಂದಕ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ಕಂಡು ಬಂದಿವೆ.
ತಮ್ಮದೇ ಪಕ್ಷದ ಅಧ್ಯಕ್ಷರ ಕುರಿತು ಕಾಂಗ್ರೆಸ್ ನಾಯಕರೇ ಮಾತನಾಡಿದ್ದು ಸಂಚಲನ ಮೂಡಿಸಿದೆ. ಜೊತೆಗೆ ವಿರೋಧ ಪಕ್ಷಗಳ ನಾಯಕರು ಕೂಡ ಕಾಂಗ್ರೆಸ್ ಬಗ್ಗೆ ಲೇವಡಿ ಮಾಡುವಂತಾಗಿದೆ. ಅದರಲ್ಲಿಯೂ ಸಿದ್ದರಾಮಯ್ಯ ಆಪ್ತ ಉಗ್ರಪ್ಪ ತಮ್ಮ ಕುರಿತು ಮಾತನಾಡಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆರಳುವಂತೆ ಮಾಡಿದೆ.
ಕಾಂಗ್ರೆಸ್ ನಾಯಕರೇ ತಮ್ಮ ಮೇಲೆ ಮಾಡಿರುವ ಆರೋಪಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿದ್ದೇನು? ಮುಂದಿದೆ ಸಂಪೂರ್ಣ ಮಾಹಿತಿ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪಗೆ ತಿರುಗೇಟು ಕೊಟ್ಟಿರುವ ಡಿ.ಕೆ. ಶಿವಕುಮಾರ್, ‘ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಪಕ್ಷದಲ್ಲಿ ಶಿಸ್ತು ಕಾಪಾಡಲು ಯಾವ ತೀರ್ಮಾನ ಕೈಗೊಳ್ಳುತ್ತದೋ ಅದಕ್ಕೆ ನಾವು ಬದ್ಧ. ಮಾಧ್ಯಮಗಳಲ್ಲಿ ತೋರಿಸುತ್ತಿರುವ ಸಂಭಾಷಣೆಗೂ (ವಿ.ಎಸ್. ಉಗ್ರಪ್ಪ ಹಾಗೂ ಸಲೀಂ ನಡುವೆ), ನನಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಅವರು ಮಾತನಾಡಿಲ್ಲ ಎಂದು ನಾನು ಹೇಳಲು ಹೋಗುವುದಿಲ್ಲ. ನೀವು ತೋರಿಸಿರುವುದು ನಿಜ. ಆದರೆ ಅದು ಇಬ್ಬರ ನಡುವಣ ಆಂತರಿಕ ಮಾತುಕತೆ. ಅಧಿಕೃತ ಹೇಳಿಕೆ ಅಲ್ಲ. ಈ ಬಗ್ಗೆ ಉಗ್ರಪ್ಪ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ’ ಎಂದಿದ್ದಾರೆ. ಜೊತೆಗೆ ಮಾಧ್ಯಮಗಳ ಕುರಿತೂ ಡಿಕೆಶಿ ಮಾತನಾಡಿದ್ದಾರೆ.
‘ನಾನು ಮಾಧ್ಯಮಗಳ ತಪ್ಪು ಎಂದು ಯಾಕೆ ಹೇಳಲಿ? ನಾವು ಮಾತನಾಡುವುದನ್ನು ನೀವು ತೋರಿಸುತ್ತೀರಿ. ಹಿಂದೆ ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರು ಮಾತನಾಡಿದ್ದನ್ನು ನೀವು ತೋರಿಸಿದ್ದೀರಿ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಅದೇ ರೀತಿ ಎಚ್. ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿರುವುದ್ದನ್ನೂ ತೋರಿಸಿದ್ದೀರಿ. ಅದೇ ರೀತಿ ಈಗ ತೋರಿಸಿದ್ದೀರಿ. ಆದರೆ ಆ ಸಂಭಾಷಣೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂಬುದು ನನ್ನ ಸ್ಪಷ್ಟವಾದ ಮಾತು’
‘ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರು, ಜೈಕಾರ ಹಾಕುವವರು, ಕಲ್ಲು ಎಸೆಯುವವರು, ಮೊಟ್ಟೆ ಹೊಡೆಯುವವರು, ಧಿಕ್ಕಾರ ಕೂಗುವವರು ಎಲ್ಲ ಪಕ್ಷಗಳಲ್ಲೂ ಇರುತ್ತಾರೆ’ ಎಂದು ಮಾಜಿ ಸಂಸದ ಉಗ್ರಪ್ಪ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
‘ಕಾಂಗ್ರೆಸ್ ಪಕ್ಷದಲ್ಲಿ ಯಾವ ಜಗಳವೂ ಇಲ್ಲ. ಗುಂಪುಗಳೂ ಇಲ್ಲ. ಈಗಿನ ಮಾತುಕತೆಗೆ ಸಂಬಂಧಿಸಿದಂತೆ ಕೆ. ರೆಹಮಾನ್ ಖಾನ್ ಅವರ ನೇತೃತ್ವದ ಕಾಂಗ್ರೆಸ್ ಶಿಸ್ತು ಸಮಿತಿಯು ಅದರ ನಿರ್ಧಾರ ಕೈಗೊಳ್ಳುತ್ತದೆ. ನಾನು ಯಾವುದೇ ಪರ್ಸೆಂಟೇಜ್ ವಿಚಾರದಲ್ಲೂ ಭಾಗಿಯಾಗಿಲ್ಲ. ಅದರ ಅಗತ್ಯವೂ ನನಗಿಲ್ಲ. ಗೃಹ ಸಚಿವರು ಯಾರಾದರೂ ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಸುಮೋಟೋ ಕೇಸ್ ದಾಖಲಿಸಿದರೂ ಒಳ್ಳೆಯದೇ.’ ಎಂದು ತಮ್ಮ ವಿರುದ್ಧ ಯಾವುದೇ ತನಿಖೆ ನಡೆದರೂ ಎದುರಿಸಲು ಸಿದ್ಧ’ ಎಂದು ಡಿ.ಕೆ. ಶಿವಕುಮಾರ್ ಇದೇ ಸಂದರ್ಭದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.