ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಕ್ಸಲ್ ಲಕ್ಷ್ಮೀ ತೊಂಬಟ್ಟು ಶರಣಾಗತಿ
ಉಡುಪಿ: ನಕ್ಸಲೈಟ್ ಚಟುವಟಿಕೆಗಳಿಂದ ದೂರ ಉಳಿದು ಒಂದೂವರೆ ದಶಕಗಳಿಂದ ಆಂಧ್ರಪ್ರದೇಶದಲ್ಲಿ ವಾಸಿಸುತ್ತಿದ್ದ ಲಕ್ಷ್ಮೀ ತೊಂಬಟ್ಟು, ಕರ್ನಾಟಕದಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಶರಣಾಗುವುದಾಗಿ ಘೋಷಿಸಿದ್ದರು. ಇದೀಗ ಇಂದು ಶರಣಾಗಿದ್ದಾರೆ. ತೊಂಬಟ್ಟು ಲಕ್ಷ್ಮೀ 2006ರಿಂದ ಕಣ್ಮರೆಯಾಗಿದ್ದರು. ಲಕ್ಷ್ಮೀ ಆಂಧ್ರಪ್ರದೇಶದಲ್ಲಿ ಪತಿ ಸಂಜೀವ ಜೊತೆಗೆ ವಾಸವಾಗಿದ್ದರು. ಈ ವೇಳೆ ಲಕ್ಷ್ಮೀ ಆಂಧ್ರಪ್ರದೇಶದಲ್ಲಿ ಪೊಲೀಸರಿಗೆ ಶರಣಾಗಿದ್ದರು.
ಆದರೆ, ಆಂಧ್ರಪ್ರದೇಶದಲ್ಲಿ ಲಕ್ಷ್ಮೀ ವಿರುದ್ಧ ಯಾವುದೇ ಪ್ರಕರಣ ಇರಲಿಲ್ಲ. ಕರ್ನಾಟಕದಲ್ಲಿ ಲಕ್ಷ್ಮಿ ವಿರುದ್ಧ ಮೂರು ಪ್ರಕರಣ ದಾಖಲಾಗಿವೆ. ಅಮಾಸ್ಯೆಬೈಲು ಠಾಣೆಯಲ್ಲಿ 3 ಪ್ರಕರಣಗಳ ವಿಚಾರಣೆ ಬಾಕಿ ಇದೆ. ಉಡುಪಿಯಲ್ಲಿ ಶರಣಾಗತಿಯಾದ ಬಳಿಕ ನಕ್ಸಲ್ ಲಕ್ಷ್ಮೀ ಮಾತನಾಡಿ, ಮುಖ್ಯಮಂತ್ರಿಗಳು ಕೊಟ್ಟ ಅವಕಾಶ ನೋಡಿ ಮುಖ್ಯವಾಹಿನಿಗೆ ಬಂದಿದ್ದೇನೆ. ನನ್ನ ಊರಿಗೆ ಏನೂ ಇಲ್ಲ, ಶಾಲೆ, ನೀರು, ಆಸ್ಪತ್ರೆ ಬೇಕು. ಯಾರ ಒತ್ತಡವಿಲ್ಲದೆ ಶರಣಾಗಿದ್ದೇನೆ ಎಂದರು.
ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯ ಶ್ರೀಪಾಲ್ ಮಾತನಾಡಿ, ನಾಲ್ಕು ವರ್ಷಗಳ ಹಿಂದೆ ಆಕೆಯ ಪತಿ ಸಲೀಂ ಶರಣಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಶರಣಾದ ನಕ್ಸಲರ ಎಲ್ಲಾ ಪ್ರಕರಣ ರದ್ದು ಮಾಡಲಾಗಿದೆ. ಹಾಗಾಗಿ ಆಕೆಯ ಪತಿ ಸಲಿಂ ಖುಲಾಸೆಗೊಂಡಿದ್ದಾರೆ. ಲಕ್ಷ್ಮಿ ಆಂಧ್ರಪ್ರದೇಶದಲ್ಲಿ ಯಾವುದೇ ಪ್ರಕರಣ ಹೊಂದಿಲ್ಲ. ಲಕ್ಷ್ಮೀ ತೊಂಬುಟ್ಟಿಗೆ ಬೇಕಾದ ಕಾನೂನು ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.