ಎಕ್ಸ್‌ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ: ನಾಲ್ವರು ಯುವಕರು ಸಾವು!
ಕೋಲಾರ: ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ಹೈವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಮೃತಪಟ್ಟಿರುವ ದುರ್ಘಟನೆ ಕೋಲಾರದ ಮಾಲೂರು ತಾಲೂಕಿನ ಅಬ್ಬೇನಹಳ್ಳಿ ಬಳಿ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪುತ್ತಿದ್ದಂತೆ ವಾಹನ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ಸೇತುವೆಯಿಂದ ನೇರವಾಗಿ ಕೆಳಗೆ ಬಿದ್ದು ಚೂರುಚೂರಾಗಿದೆ.
ಈ ದುರ್ಘಟನೆಯಲ್ಲಿಗೋಪಿ (38), ಗೌತಮ್ ರಮೇಶ್ (28), ಹರಿಹರನ್ (27), ಜಯಂಕರ್ (30) ಮೃತಟ್ಟಿದ್ದು, ಇವರೆಲ್ಲರೂ ಚೆನ್ನೈ ಮೂಲದವರು ಎಂದು ತಿಳಿದುಬಂದಿದೆ.
ಬ್ರಿಡ್ಜ್ ಮೇಲಿಂದ ಕಾರು ಕೆಳಗೆ ಬಿದ್ದ ವೇಳೆ ವಾಹನವೇ ಸಂಪೂರ್ಣ ನಜ್ಜುಗುಜ್ಜಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ನಾಲ್ವರನ್ನು ಕೂಡಲೇ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ನೀಡಿದರೂ ಜೀವ ಉಳಿಸಲಾಗಿಲ್ಲ. ಘಟನೆಯ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣಕ್ಕೆ ಸಂಬಂಧಿಸಿದ ತನಿಖೆ ಮುಂದುವರಿದಿದೆ.






