ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಆದರೆ ನಾವು ಮಾಡುತ್ತಿರೋದು ಅಭಿವೃದ್ಧಿಯ ನೆಪದಲ್ಲಿ ಮರಗಳ ಮಾರಣಹೋಮ ಮತ್ತು ಅರಣ್ಯ ನಾಶ. ಈ ಅರಣ್ಯ ವಿನಾಶದಿಂದಲೇ ಬರ, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಕಾಡುಗಳ ಬೆಳೆಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇದನ್ನು ಅರಿತ ಸರ್ಕಾರಿ ಅಧಿಕಾರಿಯೊಬ್ಬರು ಸಾವಿರಾರು ಮರಗಳ ಬೆಳೆಸಿ ನಮಗೆಲ್ಲ ಮಾದರಿಯಾಗಿದ್ದಾರೆ. ಪಂಜಾಬ್‌ನ ಲೂಧಿಯಾನದ ಐಆರ್‌ಎಸ್ ಅಧಿಕಾರಿಯೊಬ್ಬರು ಒಂದಲ್ಲಾ ಎರಡಲ್ಲಾ ಬರೋಬ್ಬರಿ ೨೫ ಕಿರು ಅರಣ್ಯ ನಿರ್ಮಿಸಿದ್ದಾರೆ. ಭಾರತೀಯ ಕಂದಾಯ ಸೇವೆಯ ಅಧಿಕಾರಿ ರೋಹಿತ್ ಮೆಹ್ರಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ಲೂಧಿಯಾನದ ಐಆರ್‌ಎಸ್ ಅಧಿಕಾರಿ ರೋಹಿತ್ ಮೆಹ್ರಾ, ಕೇವಲ ಎರಡು ವರ್ಷಗಳ ಅವಧಿಯಲ್ಲಿ 25 ಮಿನಿ ಕಾಡುಗಳನ್ನು ಸೃಷ್ಟಿಸಿದ್ದಾರೆ. 500 ಅಡಿ ಭೂಮಿಯಿಂದ ಆರಂಭಿಸಿ 4 ಎಕರೆ ಪ್ರದೇಶವನ್ನು ಹಸಿರುಮಯ ಮಾಡಿದ್ದಾರೆ. ಯಾನ ರೈಲು ನಿಲ್ದಾಣದ ಬಳಿ ಮೊದಲ ಲಂಬಾಕೃತಿಯ ಉದ್ಯಾನ ನಿರ್ಮಿಸಿದ್ದ ಅವರು, ಎರಡೇ ವರ್ಷದಲ್ಲಿ ಪಂಜಾಬ್‌ನಾದ್ಯಂತ ಈಗ 75 ಉದ್ಯಾನಗಳನ್ನು ನಿರ್ಮಿಸಿದ್ದಾರೆ.
41 ವರ್ಷದ ರೋಹಿತ್ ಮೆಹ್ರಾ ಗ್ರೀನ್ ಮ್ಯಾನ್ ಆಫ್ ಲೂಧಿಯಾನ ಎಂದೇ ಖ್ಯಾತರಾಗಿದ್ದಾರೆ. ತಮ್ಮ ವೃತ್ತಿಯ ನಡುವೆ ಅರಣ್ಯ ಬೆಳೆಸುವ ಕಾರ್ಯವನ್ನು ಕರ್ತವ್ಯ ಎಂಬಂತೆ ಪಾಲಿಸುತ್ತಿದ್ದಾರೆ. ಇದರ ಜೊತೆಗೆ ಶಾಲೆಗಳಿಗೆ ತೆರಳಿ ಮಕ್ಕಳಲ್ಲಿ ಮರಗಳ ಮಹತ್ವದ ಅರಿವು ಮೂಡಿಸಿದ್ದಾರೆ. ಕಾರ್ಖಾನೆಗಳು, ಉದ್ಯಮ ಸಂಸ್ಥೆಗಳಿರುವಲ್ಲಿ ಮರಗಳನ್ನು ಬೆಳೆಸಲು ಮನವಿ ಮಾಡಿದ್ದಾರೆ. ಪ್ರಾರಂಭದಲ್ಲಿ ಕಾಡು ಬೆಳೆಸುವ ಬಗ್ಗೆ ಅಷ್ಟೇನೂ ಜ್ಞಾನವಿರದ ರೋಹಿತ್ ಅಲ್ಪ ಅವಧಿಯಲ್ಲಿ ಕಿರುಕಾಡುಗಳನ್ನು ಹೇಗೆ ಸೃಷ್ಟಿಸಬಹುದು ಎಂಬ ಬಗ್ಗೆ ಅಧ್ಯಯನ ನಡೆಸಲಾರಂಭಿಸಿದರು. ನಂತರದಲ್ಲಿ ಜಪಾನ್‌ನ ಮಿಯಾವಕಿ ಎಂಬ ತಂತ್ರದ ಬಗ್ಗೆ ತಿಳಿದುಕೊಂಡರು. ಮರಗಳು ವೇಗವಾಗಿ ಬೆಳೆಯುವಂತೆ ಮಾಡುವ ತಾಂತ್ರಿಕ ಜ್ಞಾನಗಳನ್ನು ಪಡೆದುಕೊಂಡ ಅವರು, ಗಿಡ ಹಾಗೂ ಕಾಡುಗಳನ್ನು ಬೆಳೆಸುವ ಪ್ರಾಚೀನ ಭಾರತದ ವಿಜ್ಞಾನವನ್ನು ಅರಿಯುವ ವೃಕ್ಷಾಯುರ್ವೇದದಂತಹ ಕೃತಿಗಳನ್ನು ಕೂಡ ಓದಿದ್ದರು. ಈ ಪ್ರಾಚೀನ ಕೃತಿಯು ಜಮಾನಿನ ಮಿಯಾವಕಿ ಮಾದರಿಯಲ್ಲಿನ ತಾಂತ್ರಿಕತೆಯನ್ನೇ ಉಲ್ಲೇಖಿಸಿತ್ತು.
ಒಂದೇ ಜಾಗದಲ್ಲಿ ವಿಭಿನ್ನ ಮರಗಳನ್ನು ಬೆಳೆಸುವುದು ಕೂಡ ಅವರ ಉದ್ದೇಶವಾಗಿದ್ದು, ಬೇವು, ನಲ್ಲಿ, ಗುಲ್‌ಮೊಹರ್, ಹೊನ್ನೆ, ಜಾಕಾಯಿ, ಆಲದಮರ ಹೀಗೆ ನಾನಾ ವಿಧದ ಮರಗಳನ್ನು ಬೆಳೆಸುತ್ತಿದ್ದಾರೆ. ಲೂಧಿಯಾನದಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿನ ತೆರೆದ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸುವ ಮೂಲಕ ಮಾಲಿನ್ಯವನ್ನು ತಗ್ಗಿಸುವ ರೋಹಿತ್ ಅವರ ಕಾರ್ಯಕ್ಕೆ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಕೂಡ ಕೈಜೋಡಿಸಿದೆ. ರೋಹಿತ್ ಅವರ ಮಾರ್ಗದರ್ಶನದಲ್ಲಿ ಸೃಷ್ಟಿಯಾದ 15 ಅರಣ್ಯಗಳಲ್ಲಿ ಎಂಟು ಕಾಡುಗಳು ಕೈಗಾರಿಕಾ ಪ್ರದೇಶಗಳಲ್ಲಿಯೇ ಇವೆ ಎಂಬುದು ಗಮನಾರ್ಹ. ಲೂಧಿಯಾನ ಆಯಕರ ಭವನ ಕಟ್ಟಡದಲ್ಲಿ ನಗರದ ಮೊದಲ ವರ್ಟಿಕಲ್ ಗಾರ್ಡನ್ ಸೃಷ್ಟಿಸಿದ ಬಳಿ ಅವರ ಹೆಸರು ಲಿಮ್ಕಾ ದಾಖಲೆ ಪುಸ್ತಕದಲ್ಲಿ ದಾಖಲಾಗಿದೆ. ಈ ವರ್ಷದೊಳಗೆ ಒಂದು ಕೋಟಿ ಗಿಡಗಳನ್ನು ಬೆಳೆಸುವುದು ಅವರ ಗುರಿ.