ಅಪ್ಪ ಅಂದರೆ ಆಕಾಶ. ಮಕ್ಕಳೇ ಆತನ ಪ್ರಪಂಚ. ಅವರ ಭವಿಷ್ಯಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಡಬಲ್ಲ ತ್ಯಾಗಮಯಿ. ಅಂತಹ ತಂದೆಯ ಕರುಣಾಜನಕ ಕಥೆ ಇಲ್ಲಿದೆ.
ಕೊರೊನಾ ವೈರಸ್ ಅಟ್ಟಹಾಸದಿಂದ ಸಾಮಾನ್ಯ ಜನರ ಬದುಕು ದುಸ್ಥರವಾಗಿದೆ. ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಒಂದೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ. ಒಂದು ಕಡೆ ಕೊರೊನಾ ವೈರಸ್, ಇನ್ನೊಂದು ಕಡೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ಒದಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಎನ್ನುವುದು ಮತ್ತಷ್ಟು ಸಮಸ್ಯೆ ನೀಡುತ್ತಿದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಸಿಕ್ಕಿದೆ. ಆನ್‌ಲೈನ್ ಶಿಕ್ಷಣ ಹಿನ್ನೆಲೆ ಮಕ್ಕಳಿಗೆ ಸ್ಮಾರ್ಟ್‌ಫೋನ್ ತೆಗೆದುಕೊಡುವುದಕ್ಕಾಗಿ ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಹಸುವನ್ನೇ ಮಾರಾಟ ಮಾಡಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಜ್ವಾಲಾಮುಖಿ ಜಿಲ್ಲೆಯ ಗುಮ್ಮರ್ ಗ್ರಾಮಕ್ಕೆ ಸೇರಿದ ಕುಲದೀಪ್ ಕುಮಾರ್ ಅವರಿಗೆ ಇಬ್ಬರು ಮಕ್ಕಳು. ಅನ್ನು ಮತ್ತು ಡಿಪ್ಪು ನಾಲ್ಕನೇ ಹಾಗೂ ಎರಡನೇ ತರಗತಿಯಲ್ಲಿ ಓದುತ್ತಿದ್ದು, ಇಬ್ಬರು ಮಕ್ಕಳ ಆನ್‌ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್‌ಫೋನ್ ತೆಗೆದುಕೊಡಲು, ತನ್ನ ಕುಟುಂಬಕ್ಕೆ ಆಧಾರವಾಗಿದ್ದ ಹಸುವನ್ನು 6000 ರೂಪಾಯಿಗೆ ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಸ್ಮಾರ್ಟ್‌ಫೋನ್ ಕೊಡಿಸಿದ್ದಾರೆ.
ಲಾಕ್‌ಡೌನ್ ಕಾರಣ ಮಾರ್ಚ್‌ನಿಂದಲೂ ಶಾಲೆಗಳು ಮುಚ್ಚಿದ್ದವು. ಈಗ ಆನ್‌ಲೈನ್ ಮೂಲಕ ತರಗತಿಗಳನ್ನು ಆರಂಭಿಸಲಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಕಳೆದ ಒಂದು ತಿಂಗಳಿನಿಂದ ಹಲವು ಬ್ಯಾಂಕ್ ಹಾಗೂ ಖಾಸಗಿ ವ್ಯಕ್ತಿಗಳ ಬಳಿ ಸಾಲ ಕೇಳಿದ್ದಾರೆ. ಆದರೆ ಆರ್ಥಿಕ ಸಂಕಷ್ಟದ ಕಾರಣ ಹೇಳಿ, ಯಾರೂ ಸಾಲ ನೀಡಲಿಲ್ಲ. ಹೀಗಾಗಿ ಬೇರೆ ಮಾರ್ಗವೇ ಇಲ್ಲದಂತಾದಾಗ ಹಸುವನ್ನು 6000 ರೂಗೆ ಮಾರಾಟ ಮಾಡಿದ್ದಾರೆ ಕುಲದೀಪ್.
ಆನ್‌ಲೈನ್ ಶಿಕ್ಷಣಕ್ಕೆ ಫೋನ್ ಬೇಕೆಬೇಕು
ಸ್ಮಾರ್ಟ್‌ಫೋನ್ ಇಲ್ಲವಾದರೆ ಕಷ್ಟ ಎಂದು ಶಿಕ್ಷಕರು ಹೇಳಿದರು. ತಿಂಗಳಿಗೆ 500 ರೂಪಾಯಿ ಹೊಂದಿಸುವುದಕ್ಕೆ ಕಷ್ಟದ ಪರಿಸ್ಥಿತಿಯಲ್ಲಿರುವ ನಾನು 6000 ಹೊಂದಿಸುವುದು ಹೇಗೆ ಎಂದು ಕೇಳಿಕೊಂಡರು, ಏನೂ ಪ್ರಯೋಜನ ಆಗಲಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಕುಲದೀಪ್ ಕುಟುಂಬ ಈಗಲೇ ಸಂಕಷ್ಟದಲ್ಲಿದೆ. ವಾಸಿಸಲು ಯೋಗ್ಯ ಮನೆಯಿಲ್ಲದೇ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕುಲದೀಪ್ ಅವರ ಬಳಿ ಬಿಪಿಎಲ್ ಕಾರ್ಡ್ ಸಹ ಇಲ್ಲ. ಸಮಗ್ರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ (ಐಆರ್‌ಡಿಪಿ) ಫಲಾನುಭವಿಗಳೂ ಆಗಿಲ್ಲ. ಹೀಗಾಗಿ ಮನೆ ನಿರ್ಮಾಣಕ್ಕೆ ಮತ್ತು ಐಆರ್‌ಡಿಪಿ, ಬಿಪಿಎಲ್ ಕಾರ್ಡ್ ಮಾಡಿಸಲು, ಆಂಟೋದಯದಲ್ಲಿ ಆರ್ಥಿಕ ಸಹಾಯ ಪಡೆಯಲು ತಮ್ಮ ಹೆಸರನ್ನು ಸೇರಿಸಲು ಪಂಚಾಯತ್‌ಗೆ ಹಲವಾರು ಅರ್ಜಿಗಳನ್ನು ನೀಡಿದ್ದಾರೆ. ಆದರೆ ಯಾವುದು ಸಹ ಸ್ವೀಕೃತವಾಗಿಲ್ಲ, ಅಧಿಕಾರಿಗಳು ಸಹ ಸ್ಪಂದಿಸಿಲ್ಲ. ಇಂಥ ಪರಿಸ್ಥಿತಿಯಲ್ಲೂ ಸಹ ತಮ್ಮ ಮಕ್ಕಳ ವಿದ್ಯಾಭ್ಯಾಸ ನಿಲ್ಲಬಾರದೆಂದು ಯೋಚಿಸಿದ ಕುಲದೀಪ್ ತಮ್ಮ
ಜೀವನೋಪಾಯಕ್ಕಾಗಿ ಇದ್ದ ಒಂದು ಹಸುವನ್ನು ಮಾರಿದ್ದಾರೆ. ಇನ್ನೂ ಇವರ ಕಥೆ ಕೇಳಿದವರು ಸಹಾಯಹಸ್ತ ಚಾಚಿದ್ದಾರೆ.ನಟ ಸೋನುಸೂದ್ ಸಹ ಇವರ ಬಗ್ಗೆ ಮಾಹಿತಿ ಇದ್ದರೆ ಹಂಚಿಕೊಳ್ಳುವಂತೆ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ಜ್ವಾಲಾಮುಖಿ ಶಾಸಕ ರಮೇಶ್ ಧವಾಲಾ ನೆರವಿನ ಆಶ್ವಾಸನೆ ನೀಡಿದ್ದಾರೆ.