ಎ-ಖಾತಾ ಸೋಗಿನಲ್ಲಿ 15 ಸಾವಿರ ಕೋಟಿ ಸುಲಿಗೆ – ಹೆಚ್.ಡಿ. ಕುಮಾರಸ್ವಾಮಿ ಕಿಡಿ
ಮಂಡ್ಯ: ದೀಪಾವಳಿ ಗಿಫ್ಟ್ ಕೊಡುತ್ತಿದ್ದೇವೆ ಎಂದು ಹೇಳಿ ರಾಜ್ಯ ಸರ್ಕಾರ ಜನರನ್ನು ಮೋಸಗೊಳಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮಂಡ್ಯ ನಗರದ ಸಂಜಯ್ ವೃತ್ತದಲ್ಲಿ ಆಟೋ ನಿಲ್ದಾಣ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು,“ದೀಪಾವಳಿ ಕೊಡುಗೆ ಅಂದರೆ ಜನರು ಖುಷಿಯಾಗಬೇಕು. ಆದರೆ ಈ ಸರ್ಕಾರ ಜನರ ಕಿಸೆಯಲ್ಲೇ ಕೈ ಹಾಕಿದೆ. ಎ-ಖಾತಾ ಸೋಗಿನಲ್ಲಿ ಸುಮಾರು 15 ಸಾವಿರ ಕೋಟಿ ರೂಪಾಯಿ ಸುಲಿಗೆ ಮಾಡ್ತಿದೆ,” ಎಂದು ಗರಂ ಆಗಿ ಹೇಳಿದರು.
ಕುಮಾರಸ್ವಾಮಿ ಮುಂದುವರಿದು,
“ಎ-ಖಾತಾ ಪರಿವರ್ತನೆಗೆ ಅರ್ಜಿ ಹಾಕೋದಕ್ಕೆ 500 ರೂ. ಶುಲ್ಕದ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ವಸೂಲಿ ನಡೆಯುತ್ತಿದೆ. 30×40 ನಿವೇಶನದವರಿಂದ ಲಕ್ಷಾಂತರ ರೂಪಾಯಿ ಕಿತ್ತುಕೊಳ್ಳಲಾಗುತ್ತಿದೆ. ಮೊದಲು 10-13 ಸಾವಿರ ಕೊಡಬೇಕಿದ್ದವರಿಗೆ ಈಗ ಲಕ್ಷಗಳಲ್ಲಿ ಕಟ್ಟುವ ಪರಿಸ್ಥಿತಿ ಬಂದಿದೆ,” ಎಂದು ಆರೋಪಿಸಿದರು.
“ಗ್ಯಾರಂಟಿ ಕೊಟ್ಟು ಜನರ ಬದುಕು ಸುಲಭ ಮಾಡೋದ್ರ ಬದಲು, ಹೊಸ ತೆರಿಗೆ ಹಾಕಿ ಜನರ ಮೆಲೆ ಬಾಧೆ ಹೆಚ್ಚಿಸುತ್ತಿದೆ. ಈ ಸರ್ಕಾರದ ಗುರಿ ಜನ ಸೇವೆ ಅಲ್ಲ, ದುಡ್ಡು ಮಾಡೋದು,” ಎಂದು ಕಿಡಿಕಾರಿದರು.