ಏನಾಗ್ತಿದೆ ಬೆಂಗಳೂರಿನಲ್ಲಿ? ಬಿಹಾರ ಮೂಲದ ಯುವತಿಯ ಅಪಹರಿಸಿ ಅತ್ಯಾಚಾರ
ಬೆಂಗಳೂರು: ಇಡೀ ನಗರವೇ ನಾಚಿಕೆ ಪಡುವಂತಹ ಘಟನೆ ಇದೀಗ ಬೆಂಗಳೂರಿನಲ್ಲಿ ನಡೆದಿದೆ. ಮಧ್ಯರಾತ್ರಿ ವೇಳೆ ಕಾಮುಕರು ಮಹಿಳೆಯೋರ್ವಳನ್ನು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಹೌದು ಬಿಹಾರ ಮೂಲದ ಯುವತಿ ಕೇರಳದ ಎರ್ನಾಕುಲಂನಿಂದ ಬೆಂಗಳೂರಿನ ಕೆ.ಆರ್.ಪುರಂ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಳು. ಇದಕ್ಕೂ ಮುನ್ನ, ತನ್ನ ದೊಡ್ಡಮ್ಮನ ಮಗನಿಗೆ ಕರೆ ಮಾಡಿ, ಬೆಂಗಳೂರಿಗೆ ಬರುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಳು. ಅಣ್ಣನ ಸೂಚನೆಯಂತೆ ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಳು.
ಬಳಿಕ, ಊಟಕ್ಕಾಗಿ ಮಹದೇವಪುರ ಕಡೆಗೆ ತನ್ನ ಅಣ್ಣನೊಂದಿಗೆ ತೆರಳುತ್ತಿದ್ದಾಗ ಇಬ್ಬರು ಅಪರಿಚಿತರು ಬೈಕ್ ಅಡ್ಡಗಟ್ಟಿದ್ದಾರೆ. ಅಪರಿಚಿತರು ಯುವತಿಯ ಅಣ್ಣನ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ಅಪಹರಿಸಿದ್ದಾರೆ. ನಂತರ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ.
ದುಷ್ಕೃತ್ಯದ ವೇಳೆ ಯುವತಿಯ ಕಿರುಚಾಟ ಕೇಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ಒಬ್ಬ ಆರೋಪಿಯನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ. ಮಹದೇವಪುರ ಪೊಲೀಸರು ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಆಶಿಫ್ ಎಂಬಾತ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.