ಕಜ್ಜಾಯ ಕೊಡ್ತೀನಿ ಅಂತ ಕರೆದು ಕೊಲೆ: ದೃಶ್ಯ ಸಿನಿಮಾ ಶೈಲಿಯಲ್ಲಿ ವೃದ್ಧೆಯ ಹತ್ಯೆ!
ಬೆಂಗಳೂರು, ನವೆಂಬರ್ 09: ದೃಶ್ಯ ಸಿನಿಮಾವನ್ನು ನೆನಪಿಸುವಂತೆಯೇ ನಡೆದಿರುವ ಭೀಕರ ಕೊಲೆ ಪ್ರಕರಣವೊಂದು ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಕೂಗೂರು ಗ್ರಾಮದ 68 ವರ್ಷದ ಭದ್ರಮ್ಮ ಅಕ್ಟೋಬರ್ 30ರಂದು ಕಾಣೆಯಾಗಿದ್ದರು. ಕುಟುಂಬದವರು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಮುಂದುವರೆದ ವೇಳೆ, ಭದ್ರಮ್ಮ ಅವರನ್ನು ಕೊನೆಯದಾಗಿ ಗ್ರಾಮದಲ್ಲಿನ ದೀಪಾ ಎಂಬ ಮಹಿಳೆಯ ಮನೆಯಲ್ಲಿ ಕಂಡುಬಂದಿದ್ದರೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು.
ಪೊಲೀಸರು ವಿಚಾರಣೆ ಕೈಗೊಂಡಾಗ, ದೀಪಾ ಕೊನೆಗೂ ಕೊಲೆ ರಹಸ್ಯ ಬಯಲುಮಾಡಿದ್ದಾಳೆ.
ಪೊಲೀಸ್ ಮೂಲಗಳ ಪ್ರಕಾರ, ದೀಪಾ ವೃದ್ಧೆಯನ್ನ “ಕಜ್ಜಾಯ ಕೊಡ್ತೀನಿ” ಎಂದು ಮನೆಗೆ ಕರೆದುಕೊಂಡು ಹೋಗಿ, ಚಿನ್ನದ ಸರಕ್ಕಾಗಿ ಕೊಲೆ ಮಾಡಿದಳು. ಬಳಿಕ ಮೃತದೇಹವನ್ನು ಮೂಟೆ ಕಟ್ಟಿ ಮನೆಯಲ್ಲೇ ಎರಡು ದಿನ ಇಟ್ಟುಕೊಂಡಿದ್ದಳು. ದುರ್ವಾಸನೆ ಹೆಚ್ಚಾದ ಬಳಿಕ, ಮಗನ ಸಹಾಯದಿಂದ ಮೃತದೇಹವನ್ನು ಮತ್ತೊಂದು ಚೀಲಕ್ಕೆ ಹಾಕಿ ದೊಡ್ಡತಿಮ್ಮಸಂದ್ರ ಕೆರೆಯ ಪೊದೆಯಲ್ಲಿ ಎಸೆದಳು.
ಘಟನೆಯ ಬಳಿಕ, ದೀಪಾ ಗ್ರಾಮಸ್ಥರ ಮುಂದೆ ಏನೂ ಗೊತ್ತಿಲ್ಲದಂತೆ ನಟಿಸಿದ್ದಾಳೆ.
ಸರ್ಜಾಪುರ ಇನ್ಸ್‌ಪೆಕ್ಟರ್ ನವೀನ್ ನೇತೃತ್ವದ ಪೊಲೀಸರು ಚಾಣಾಕ್ಷತನದಿಂದ ಪ್ರಕರಣವನ್ನು ಭೇದಿಸಿದ್ದು, ದೀಪಾಳನ್ನು ಬಂಧಿಸಿದ್ದಾರೆ. ವೃದ್ಧೆ ಭದ್ರಮ್ಮ ಅವರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.






