ಕನ್ನಡಿಗರ ಆಕ್ರೋಶಕ್ಕೆ ಸೊಪ್ಪು ಹಾಕದೆ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ ನಟ ಕಮಲ್ ಹಾಸನ್!
ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂದಿರುವ ನಟ ಕಮಲ್ ಹಾಸನ್ ಅವರು ಕ್ಷಮೆ ಕೇಳಲು ನಿರಾಕರಿಸುತ್ತಿದ್ದಾರೆ. ಕಮಲ್ ಹಾಸನ್ ಅವರ ಮೊಂಡಾಟದ ಮಧ್ಯೆ ಅವರು ಅಭಿನಯದ ಥಗ್‌ಲೈಫ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕನ್ನಡಿಗರು ವಿರೋಧಿಸುತ್ತಿರುವ ಬೆನ್ನಲ್ಲೇ ಕಮಲ್ ಹಾಸನ್ ಅವರು ಕ್ಷಮೆ ಕೇಳದೇ ದುಬೈ, ಸಿಂಗಾಪುರ ಪ್ರವಾಸದಲ್ಲಿದ್ದಾರೆ. ಥಗ್ ಲೈಫ್ ಬಿಡುಗಡೆಗೆ ಇನ್ನು 2 ದಿನ ಬಾಕಿ ಇರುವಾಗಲೇ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರುವ ರಾಜ್ಕಮಲ್ ಫಿಲ್ಮ್ ಇಂಟರ್ನ್ಯಾಷನಲ್ ಸಂಸ್ಥೆಯು ಹೈಕೋರ್ಟ್ ಕದ ತಟ್ಟಿದೆ.
ಚಿತ್ರದ ಸಹ ನಿರ್ಮಾಕ ಸಂಸ್ಥೆಯಾಗಿರುವ ರಾಜ್ಕಮಲ್ ಫಿಲ್ಮ್ ಇಂಟರ್ನ್ಯಾಷನಲ್ ಸಂಸ್ಥೆಯ ಮುಖ್ಯ ಕಾರ್ಯನಿವರ್ಹಣಾಧಿಕಾರಿ (ಸಿಇಒ) ವಿ.ನಾರಾಯಣನ್ ಅವರ ಮೂಲಕ ಕಮಲ್ ಹಾಸನ್ ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನ್ಯಾಯಪೀಠದ ಮುಂದೆ ನಿಗದಿಯಾಗಬೇಕಾಗಿದೆ.
ತಮ್ಮ ನಿರ್ಮಾಣ ಸಿನಿಮಾ ಥಗ್ ಲೈಫ್ ಇದೇ ಜೂನ್ 5ಕ್ಕೆ ಬಿಡುಗಡೆ ಆಗಲಿದೆ. ಕರ್ನಾಟಕ ರಾಜ್ಯದ ಎಲ್ಲ ಭಾಷೆಗಳಲ್ಲಿ ಪ್ರದಶನವಾಗಲಿದ್ದು, ಅದಕ್ಕೆ ಯಾವುದೇ ರೀತಿಯಲ್ಲಿಯೂ ತಡೆಯುವ ಮತ್ತು ನಿರ್ಬಂಧಿಸುವಂತಹ ಕ್ರಮಗಳನ್ನು ನೇರವಾಗಿ ಇಲ್ಲವೇ ಪರೋಕ್ಷವಾಗಿ ತೆಗೆದುಕೊಳ್ಳದಂತೆ ಪರಮಾದೇಶ ಹೊರಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಲ್ಲದೆ, ಸಿನಿಮಾ ಪ್ರದರ್ಶನವನ್ನು ತಡೆಯದಂತೆ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿರ್ಬಂಧ ವಿಧಿಸಬೇಕು. ಸಿನಿಮಾ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕು. ಚಿತ್ರ ನಿರ್ಮಾಪಕರು, ನಿರ್ದೇಶಕರು ಮತ್ತು ಚಿತ್ರ ತಂಡಕ್ಕೆ ತೊಂದರೆಯಾಗದಂತೆ ಅಗತ್ಯ ಭದ್ರತೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.