ಕೋಟ್ಯಂತರ ಭಾರತೀಯರ ಕನಸು ಇಂದು ನನಸಾಗಿದೆ. ಕಾತುರದಿಂದ ಕಾಯ್ತಿದ್ದ ಕ್ಷಣವನ್ನೂ ಪ್ರತಿಯೊಬ್ಬರು ಕಣ್ತುಂಬಿಕೊಂಡಿದ್ದಾರೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲ ನಿರ್ಮಾಣಕ್ಕೆ ಅಡಿಗಲ್ಲಿಡಲಾಗಿದೆ. ಎಲ್ಲೆಲ್ಲೂ ರಾಮಜಪ ಮೊಳಗಿದೆ.
ರಾಮಾಯಣಕ್ಕೆ ಸಾಕ್ಷಿಯಾಗಿ ನಮ್ಮ ಭಾರತದ ಎಷ್ಟೋ ಪೌರಾಣಿಕ ಸ್ಥಳಗಳಿವೆ. ಅದರಲ್ಲಿ ರಾಮನಿಗೂ ನಮ್ಮ ಕರ್ನಾಟಕಕ್ಕೂ ನಂಟಿದೆ. ಸೀತಾವಲ್ಲಭನೂ ನಮ್ಮ ಕರ್ನಾಟಕಕ್ಕೆ ಬಂದಿದ್ದ ಎಂದು ಪುರಾಣ ಹೇಳುತ್ತೆ. ಅದಕ್ಕೆ ಸಾಕ್ಷಿಯಾಗಿ ಕೆಲವೊಂದು ಕುರುಹುಗಳು ಇಂದಿಗೂ ಕರ್ನಾಟಕದಲ್ಲಿದ್ದು, ಪೂಜಿಸಲ್ಪಡುತ್ತಿವೆ.ಬಳ್ಳಾರಿಯ ಹಂಪಿಗೆ ರಾಮ ಬಂದಿದ್ದ ಎಂಬ ಉಲ್ಲೇಖವಿದೆ. ಪುಣ್ಯಕ್ಷೇತ್ರ ಹಂಪಿಯನ್ನ ರಾಮಾಯಣದಲ್ಲಿ ಕಿಷ್ಕಿಂದೆ ನಗರ ಎಂದು ಕರೆಯಲಾಗುತ್ತಿತ್ತು. ಈ ಕಿಷ್ಕಿಂದೆ ನಗರ ಹಂಪಿಗೂ ಅಯೋಧ್ಯೆ ರಾಮನಿಗೂ ಸಂಬಂಧ ಇದೆ.
ಸೀತೆಯನ್ನು ಅರಸುತ್ತಾ ಬಂದ ರಾಮ ಲಕ್ಷ್ಮಣರು , ಹಂಪಿಯ ಮಾಲ್ಯವಂತ ಪರ್ವತದಲ್ಲಿರುವ ರಘುನಾಥ ದೇವಾಲಯದಲ್ಲಿ ತಪಸ್ಸಿಗೆ ಕುಳಿತ ಐತಿಹ್ಯವಿದೆ. ಅಷ್ಟೇ ಅಲ್ಲ ಇಲ್ಲಿ ಶ್ರೀರಾಮ ತಪಸ್ಸಿಗೆ ಕುಳಿತಿರುವ ವಿಗ್ರಹ ಕೂಡ ಇದೆ.ಅಲ್ಲದೇ ಸೀತಾದೇವಿಯನ್ನ ಅರಸುತ್ತಾ ಹಂಪಿಗೆ ಬಂದ ಶ್ರೀರಾಮ ಸುಗ್ರೀವರ ನೆರವು ಕೇಳುತ್ತಾರೆ. ಆಗ ವಾಲಿ-ಸುಗ್ರೀವರ ನಡುವೆ ನಡೆದ ಯುದ್ದದಲ್ಲಿ ಶ್ರೀರಾಮ ವಾಲಿಯನ್ನ ಸಂಹಾರ ಮಾಡುತ್ತಾರೆ. ಹೀಗೆ ಸುಗ್ರೀವ ವಾಸವಾಗಿದ್ದ ಗುಹೆಯನ್ನ ಈಗಲೂ ಹಂಪಿಯಲ್ಲಿ ಕಾಣಬಹುದು.
ರಾಮ, ಲಕ್ಷ್ಮಣರಿಬ್ಬರು ಸೀತೆಯನ್ನ ಹುಡುಕಿ ಬ್ರಹ್ಮಗಿರಿ ಮಾರ್ಗವಾಗಿ ತೆರಳುತ್ತಾರೆ. ಈ ವೇಳೆ ಬಾಯಾರಿಕೆಯಿಂದ ಬಳಲಿದ ರಾಮನಿಗೆ ನೀರು
ಕೊಡಲು, ಲಕ್ಷ್ಮಣ ಬೆಟ್ಟಕ್ಕೆ ಬಾಣ ಹೊಡೆದು ನೀರು ತರಿಸಿದ್ದ. ನಂತರ ಅದೇ ಲಕ್ಷ್ಮಣ ತೀರ್ಥ ಆಯ್ತು ಅನ್ನೋ ನಂಬಿಕೆ ಇದೆ.
ಕೊಡಗಿನ ಬ್ರಹ್ಮಗಿರಿ ಬೆಟ್ಟದಲ್ಲಿ ಹುಟ್ಟುವ ಲಕ್ಷ್ಮಣ ತೀರ್ಥ ನದಿ ಮೈಸೂರಿನ ಹುಣಸೂರು ಸಮೀಪ ಕಾವೇರಿ ನದಿ ಸೇರುತ್ತದೆ. ಲಕ್ಷಣ ತೀರ್ಥ ನದಿ ಇರ್ಪು ಜಲಪಾತವಾಗಿ ಇಂದಿಗೂ ಪ್ರವಾಸಿಗರನ್ನ ಆಕರ್ಷಣೆ ಮಾಡುತ್ತಿದೆ.
ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನಲ್ಲಿರುವ ಚುಂಚನಕಟ್ಟೆ ಎಂಬ ಸ್ಥಳಕ್ಕೆ ರಾಮ- ಲಕ್ಷ್ಮಣ- ಸೀತೆ ಬಂದಿದ್ದರು ಎಂಬ ಐತಿಹ್ಯವಿದೆ. ಈ ಚುಂಚನಕಟ್ಟೆ ಜಲಪಾತದಲ್ಲಿ ಸೀತೆ ಸ್ನಾನ ಮಾಡಿದ್ದರೆಂಬ ಪ್ರತೀತಿ ಇದೆ. ವಿಶೇಷ ಅಂದ್ರೆ ಸೀತೆ ಸ್ನಾನ ಮಾಡಿದ ಸ್ಥಳದಲ್ಲಿ ಈಗಲೂ ಹಳದಿ ಮಿಶ್ರಿತ ನೀರು ಹರಿಯುತ್ತಿದ್ದು, ಸೀತೆ ಬಳಸಿದ ಸೀಗೆಕಾಯಿ ಹಾಗೂ ಆಕೆಯ ಅರಿಸಿನದಿಂದ ಬಂದ ನೀರು ಅನ್ನೋ ನಂಬಿಕೆ ಕೂಡ ಇದೆ. ಇದನ್ನು ಸೀತೆ ಮಡು ಎಂದು ಕರೆಯುತ್ತಾರೆ.
ರಾಮನಗರ ಜಿಲ್ಲೆಯಲ್ಲಿರುವ ರಾಮದೇವರ ಬೆಟ್ಟದಲ್ಲಿ ಶ್ರೀರಾಮನ ದೇವಸ್ಥಾನವಿದೆ. ವನವಾಸದ ಸಮಯದಲ್ಲಿ ರಾಮ, ಸೀತೆ ಜೊತೆ ಈ ಬೆಟ್ಟಕ್ಕೆ ಬಂದು, 14 ದಿನಗಳ ಕಾಲ ತಂಗಿದ್ದರಂತೆ. ಈ ವೇಳೆ ಕಾಕಾಸುರ ಎಂಬ ರಾಕ್ಷಸ, ಸೀತೆಯನ್ನ ಕೆಣಿಕಿದ್ದನಂತೆ. ಹೀಗಾಗಿ ಶ್ರೀರಾಮ ಕಾಕಾಸುರನ ಒಂದು ಕಣ್ಣಿಗೆ ಬಾಣ ಬಿಟ್ಟು, ಕಣ್ಣು ಕಿತ್ತು ಹಾಕಿದ್ದ ಎಂಬ ಪ್ರತೀತಿ ಇದೆ.ಹೀಗಾಗಿಯೇ ಬೆಟ್ಟದಲ್ಲಿರೋ ರಾಮನ ದೇವಸ್ಥಾನದ ಮುಂಭಾಗ ಕಾಕಾಸುರ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ .
ತುಮಕೂರಿನಲ್ಲಿ ರಾಮನ ಪರಿವಾರ ಓಡಾಡಿದ ಐತಿಹ್ಯವಿದೆ. ಶ್ರೀ ರಾಮನು ಲಂಕೆಗೆ ಹೋಗುವಾಗ ದೇವರಾಯನ ದುರ್ಗದಲ್ಲಿ ನೆಲೆನಿಂತನಂತೆ. ಈ ವೇಳೆ ಕಾಡಿನಲ್ಲಿ ರಾಮನಿಗೆ ಹಣೆಗೆ ತಿಲಕವಿಡುವ ಸಂದರ್ಭ ಬಂದಿತ್ತಂತೆ. ಆಗ ಸುತ್ತಲೂ ನೋಡಿದರೂ ನೀರು ಸಿಗದ ಕಾರಣ ರಾಮ, ಬಾಣ ಹೂಡಿ ಬಂಡೆಯ ಮೇಲೆ ಬಿಟ್ಟಾಗ, ಬಾಣ ಹೊಕ್ಕಿ ಬಂಡೆಯ ರಂಧ್ರದಿಂದ ನೀರು ಚಿಮ್ಮಿತು ಎನ್ನುವ ಪ್ರತೀತಿ ಇದೆ.
ಆಗ ಆ ನೀರನ್ನು ತೆಗೆದುಕೊಂಡು ರಾಮ ತನ್ನ ಹಣೆಗೆ ನಾಮವನ್ನ ಧರಿಸಿದನಂತೆ. ಈ ಹಿನ್ನೆಲೆಯಲ್ಲಿ ನಾಮ ಚಿಲುಮೆ ಅಂತಾ ಹೆಸರು ಬಂದಿದೆ. ಕಡು ಬೇಸಿಗೆಯಲ್ಲೂ ಕೂಡ ಬಂಡೆಯಿಂದ ನೀರು ಬರುತ್ತಿರುವುದು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಅಂಬುತೀರ್ಥಕ್ಕೆ ರಾಮನ ನಂಟಿದೆ. ರಾಮನು ಅರಣ್ಯವಾಸದಲ್ಲಿದ್ದಾಗ ಸೀತಾ ಸಮೇತನಾಗಿ ಇಲ್ಲಿ ನೆಲೆಸಿದ್ದನಂತೆ. ಆ ಸಮಯದಲ್ಲಿ ತಮ್ಮ ನಿತ್ಯದ ಪೂಜಾಕಾರ್ಯ, ಬಾಯಾರಿಕೆ ನೀಗಿಸುವ ಪ್ರಯುಕ್ತ ಹಾಗೂ ಇತರ ಕಾರ್ಯಗಳಿಗಾಗಿ ಬೇಕಾಗುವ ನೀರನ್ನು ಹೊಂದುವ ಸಲುವಾಗಿ ನೆಲಕ್ಕೆ ಬಾಣವನ್ನು ಬಿಟ್ಟಾಗ ತೀರ್ಥೋದ್ಭವವಾಯಿತಂತೆ.
ಅಂಬು ಅಥವಾ ಬಾಣ ಬಿಟ್ಟಾಗ ಈ ತೀರ್ಥ ಉದ್ಭವವಾದ್ದರಿಂದ ಇದಕ್ಕೆ ಅಂಬುತೀರ್ಥವೆಂದು ಹೆಸರಾಗಿದೆ. ಶ್ರೀರಾಮನ ಶರದಿಂದ ಹುಟ್ಟಿದ್ದರಿಂದ ಈ ನದಿಗೆ ಶರಾವತಿ ಎಂಬ ಹೆಸರು ಬಂದಿದೆಯಂತೆ. ಇಲ್ಲಿರುವ ಶಿವಲಿಂಗವನ್ನು ಶ್ರೀರಾಮನು ಸೀತಾ ಸಮೇತನಾಗಿ ಪೂಜಿಸುತ್ತಿದ್ದನಂತೆ.
ಇನ್ನು ಬೆಳಗಾವಿ ಜಿಲ್ಲೆಗೂ ಶ್ರೀರಾಮನಿಗೂ ಅವಿನಾನುಭ ನಂಟಿದೆ. ಶ್ರೀರಾಮನ ಪರಮ ಭಕ್ತೆ ಶಬರಿ ರಾಮನಿಗಾಗಿ ಕಾಯ್ದಿದ್ದು ಬೆಳಗಾವಿ ಜಿಲ್ಲೆಯಲ್ಲೇ ಎನ್ನಲಾಗುತ್ತದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಸಮೀಪದ ಶಬರಿಕೊಳ್ಳದಲ್ಲಿ ರಾಮನಿಗಾಗಿ ಕಾದಿದ್ದರಂತೆ. ರಾಮ ಲಕ್ಷ್ಮಣನೊಂದಿಗೆ ವನವಾಸಕ್ಕೆ ಬರುವ ಮಾರ್ಗದಲ್ಲಿ ಶಬರಿ ರಾಮನಿಗಾಗಿ ತಾನು ಸಂಗ್ರಹಿಸಿದ ಬೋರೆ ಹಣ್ಣುಗಳನ್ನು ನೀಡಿದ್ದರೆಂದು ರಾಮಾಯಣದಲ್ಲಿ ಉಲ್ಲೇಖವಾಗಿದೆ.