ಕೊರೊನಾ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಮೋದಿ ಸ್ವಾವಲಂಬಿ ಭಾರತ ನಿರ್ಮಾಣದ ಮಾತುಗಳನ್ನಾಡಿದ್ದರು. ಪ್ರಧಾನಿ ಮೋದಿ ಓಕಲ್ ಫಾರ್ ಲೋಕಲ್ ಪರಿಕಲ್ಪನೆಯಡಿ ಆತ್ಮನಿರ್ಭರ್ ಭಾರತ್ ಯೋಜನೆ ಘೋಷಿಸಿದ್ರು. ಇದೀಗ ಇದೇ ಪರಿಕಲ್ಪನೆಯಡಿ ರಾಜ್ಯ ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ.
ಹೌದು, ಆತ್ಮನಿರ್ಭರ್ ಯೋಜನೆಯಡಿ ದೇಶದ ಮೊದಲ ಆಟಿಕೆ ಉತ್ಪಾದನಾ ಘಟಕ ಆರಂಭಿಸಲು ಬಿಎಸ್ ಯಡಿಯೂರಪ್ಪ ಸರ್ಕಾರ ಮುಂದಾಗಿದೆ. ಕೊಪ್ಪಳದಲ್ಲಿ ದೇಶದ ಮೊದಲ ಆಟಿಕೆ ಉತ್ಪಾದನಾ ಘಟಕ ಆರಂಭಿಸಲಿದೆ.
ಮೋದಿ ಮನ್ ಕೀ ಬಾತ್ ಕಾರ್ಯಕ್ರಮದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ದೇಶದ ಮೊದಲ ಆಟಿಕೆ ಉತ್ಪಾದನಾ ಘಟಕ ಕೊಪ್ಪಳದಲ್ಲಿ ಸ್ಥಾಪನೆಯಾಗಲಿದ್ದು, ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಓಕಲ್ ಫಾರ್ ಲೋಕಲ್ ಪರಿಕಲ್ಪನೆಯನ್ನು ಜಾರಿಗೆ ತರಲಾಗುವುದು ಎಂದ್ರು.
ಕೊಪ್ಪಳದ ಸುಮಾರು 400 ಎಕರೆ ಜಮೀನಿನಲ್ಲಿ ಆಟಿಕೆ ತಯಾರಿಕಾ ಕ್ಲಸ್ಟರ್ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿದ್ದು, ಇದಕ್ಕಾಗಿ ಐದು ಸಾವಿರ ಕೋಟಿ ವ್ಯಯಿಸಲಿದೆ. ಇನ್ನೂ ರಾಷ್ಟ್ರೀಯ ಹೆದ್ದಾರಿ 63 ಮತ್ತು ಬೆಳಗಾವಿ ವಿಮಾನ ನಿಲ್ದಾಣ ಸಂಪರ್ಕಿಸುವಂತೆ ಈ ಕ್ಲಸ್ಟರ್ ನಿರ್ಮಾಣವಾಗಲಿದ್ದು, ಸುಮಾರು 40 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಇನ್ನೂ ಈಗ ಆಟಿಕೆ ಉದ್ಯಮ ಶೆ.೧೮ರಷ್ಟು ಪ್ರಗತಿ ಸಾಧಿಸಿದ್ದು, 2023ರ ವೇಳೆಗೆ 2300 ಕೋಟಿ ಮಾರುಕಟ್ಟೆ ಮೌಲ್ಯ ತಲುಪುವ ನಿರೀಕ್ಷೆ ಇದೆ.
ಜಾಗತಿಕ ಆಟಿಕೆ ಉದ್ಯಮ 7 ಲಕ್ಷ ಕೋಟಿ ರೂ.ಗಳಿಗೂ ದೊಡ್ಡದು. ಆದರೆ ಅದರಲ್ಲಿ ಈಗ ಭಾರತದ ಪಾಲು ಬಹಳ ಕಡಿಮೆ ಇದೆ. ಅದನ್ನು ಹೆಚ್ಚಿಸಲು ಯತ್ನಿಸಬೇಕು. ಸ್ಟಾರ್ಟಪ್‌ಗಳು ಈ ಬಗ್ಗೆ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಕಂಟ್ಯೂಟರ್ ಗೇಮ್‌ಗಳನ್ನೂ ಸೃಷ್ಟಿಸಲು ನಾವು ಯತ್ನಿಸಬೇಕು. ಭಾರತಕ್ಕೆ ಜಗತ್ತಿನ ‘ಟಾಯ್ ಹಬ್’ ಆಗುವ ಎಲ್ಲ ಸಾಮರ್ಥ್ಯವೂ ಇದೆ. ಎಂದು ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್’ನಲ್ಲಿ ಹೇಳಿದ್ದರು.
ಭಾರತದಲ್ಲಿ ಮಕ್ಕಳು ಬಳಸುತ್ತಿರುವ ಬಹುತೇಕ ಆಟಿಕೆಗಳು ಆಮದಾದವು. ಹೆಚ್ಚಿನವು ಚೀನಾದಿಂದ ಬಂದವು. ಒಂದು ಲೆಕ್ಕಾಚಾರದ ಪ್ರಕಾರ ನಾವು ನಮ್ಮ ಬಳಕೆಯ ಶೇ.80ರಷ್ಟು ಆಟಿಕೆಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಎಲೆಕ್ಟ್ರಾನಿಕ್ಸ್ ವಸ್ತುಗಳಲ್ಲಿ ಹೇಗೋ ಹಾಗೆ, ಆಟಿಕೆಗಳಿಗೂ ನಾವು ಚೀನಾವನ್ನೇ ಅವಲಂಬಿಸಿದ್ದೇವೆ.
ಹಾಗಂತ ಭಾರತದ ಆಟಿಕೆ ವ್ಯವಹಾರ ಏನು ಕಡಿಮೆಯದಲ್ಲ. ಪ್ರತಿವರ್ಷ ಇಲ್ಲಿ ನಡೆಯುವ ಆಟಿಕೆ ಉದ್ಯಮದ ವಹಿವಾಟಿನ ಪ್ರಮಾಣ ಸುಮಾರು 10,000 ಕೋಟಿ ರೂ. 2018-19ರಲ್ಲಿ ಚೀನಾದಿಂದ ಭಾರತ ತರಿಸಿಕೊಂಡ ಆಟಿಕೆಗಳ ಮೊತ್ತ 2,127 ಕೋಟಿ ರೂ. ಯುರೋಪ್, ಅಮೆರಿಕ ಮುಂತಾದ ಕಡೆ ಉತ್ಪಾದನಾ ವೆಚ್ಚ ಹೆಚ್ಚಿದ ಪರಿಣಾಮ, ಆಟಿಕೆ ಕಂಪನಿಗಳೆಲ್ಲ ಚೀನಾಗೆ ಸ್ಥಳಾಂತರ ಮಾಡಿದವು. ಅದರ ಪರಿಣಾಮವೇ ಈ ಚೀನಾ ಪ್ರವಾಹವಾಗಿದೆ.
ಭಾರತದಲ್ಲಿ ಎಂದೂ ಆಟಿಕೆಗಳ ದೊಡ್ಡ ಪ್ರಮಾಣದ ಉತ್ಪಾದನೆ ಇರಲೇ ಇಲ್ಲ. ಕೆಲವೇ ಕೆಲವು ಸಾಂಪ್ರದಾಯಿಕ, ಪರಂಪರೆಯ ಆಟಿಕೆಗಳಿದ್ದವು. 1990ರ ದಶಕದ ಬಳಿಕ ಭಾರತದಲ್ಲಿ ಮಧ್ಯಮವರ್ಗ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಯಿತು. ಅವಿಭಕ್ತ ಕುಟುಂಬಗಳು ಹೆಚ್ಚಾದವು. ಆಟಿಕೆಗಳಿಗೆ ಬೇಡಿಕೆ ಹೆಚ್ಚಾಯಿತು. ಅದೇ ಪ್ರಮಾಣದ ಉತ್ಪಾದನೆ ಇಲ್ಲಿ ಇರಲಿಲ್ಲ. ಚನ್ನಪಟ್ಟಣದ ಆಟಿಕೆಗಳಂಥ ಸಾಂಪ್ರದಾಯಿಕ ಆಟಿಕೆಗಳು ಅದರ ಕಲಾಕೌಶಲ, ಸೊಫಿಸ್ಟಿಕೇಶನ್ ಇತ್ಯಾದಿಗಳಿಂದ ಮಧ್ಯಮರ್ಗದವರಿಗೆ ದುಬಾರಿಯೆನಿಸಿದವು. ಇದನ್ನು ಚೀನಾದ ಆಟಿಕೆಗಳು ಬಳಸಿಕೊಂಡವು. ಇದೀಗ ಆಟಿಕೆ ತಯಾರಿಕೆ ಪ್ರಮಾಣ ಹೆಚ್ಚಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರ ಪರಿಣಾಮಕಾರಿಯಾಗಲಿದೆ.