ಕಾಲ್ತುಳಿತ ಕೇಸ್: ಭರದಿಂದ ಸಾಗ್ತಿದೆ CID ವಿಷೇಷ ತಂಡದಿಂದ ತನಿಖೆ..!
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಐಡಿ ವಿಶೇಷ ತನಿಖಾ ತಂಡದಿಂದ ಗಂಭೀರ ತನಿಖೆ ನಡೆಯುತ್ತಿದೆ. ಈ ತನಿಖೆಯಲ್ಲಿ ಹಲವಾರು ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.
ಸಿಐಡಿ ಅಧಿಕಾರಿಗಳು ಸಾವಿರಾರು ಸಿಸಿಟಿವಿ ದೃಶ್ಯಗಳು, ವಿಡಿಯೋ ಕ್ಲಿಪ್ಗಳು ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಘಟನೆ ಎಷ್ಟು ಹೊತ್ತಿಗೆ ಆರಂಭವಾಯಿತು, ಹೇಗೆ ಕಾಲ್ತುಳಿತ ಉಂಟಾಯಿತು ಎಂಬುದರ ಬಗ್ಗೆ ಟೈಮ್ಲೈನ್ನಂತೆ ತನಿಖೆ ನಡೆಸುತ್ತಿದ್ದಾರೆ.
ತಕ್ಷಣದ ಕಾರ್ಯಕ್ರಮ ಆಯೋಜನೆಯ ನಿರ್ಧಾರ RCB ಸಿಇಒ ರಾಜೇಶ್ ಮೆನನ್ ಮತ್ತು ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸ್ಲೆ ಅವರಿಂದಲೇ ಬಂದಿದ್ದೆಂದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ. ಈ ಇಬ್ಬರ ಒತ್ತಡದಿಂದಲೇ KSCA ಮೇಲೆ ಒತ್ತಡ ಹಾಕಿ ಕಾರ್ಯಕ್ರಮ ಆಯೋಜನೆಯಾಗಿತ್ತು ಎನ್ನಲಾಗಿದೆ. ವಿರಾಟ್ ಕೊಹ್ಲಿ ಇಂಗ್ಲೆಂಡ್ಗೆ ಪ್ರಯಾಣ ಮಾಡುವ ಹಿನ್ನೆಲೆಯ ಮೇಲೆ, ಕಾರ್ಯಕ್ರಮವನ್ನು ಮುಂದೂಡದೆ ತಕ್ಷಣ ನಡೆಸಬೇಕೆಂದು ಒತ್ತಡ ಹಾಕಲಾಗಿತ್ತು ಎಂದು ವರದಿಯಾಗಿದೆ.
ಪೊಲೀಸ್ ಬಂದೋಬಸ್ತ್: ನಿರ್ಲಕ್ಷ್ಯ ಹಾಗೂ ಸಂಯೋಜನೆಯ ಕೊರತೆ
ಪೊಲೀಸ್ ಇಲಾಖೆ ಮತ್ತು KSCA ತಾವು ಕಾರ್ಯಕ್ರಮವನ್ನು ಮುಂದೂಡಬೇಕೆಂದು ಸಲಹೆ ನೀಡಿದರೂ, ನಿಖಿಲ್ ಸೋಸ್ಲೆ ಒತ್ತಡದಿಂದ ಕಾರ್ಯಕ್ರಮ ಮುಂದುವರಿಯಿತು. ಈ ಮಧ್ಯೆ, ಟಿಕೆಟ್ ಗೊಂದಲವೂ ಘಟನೆಗೆ ಕಾರಣವಾಗಿದೆ. RCB ಪೇಜ್ನಲ್ಲಿ ಫ್ರೀ ಟಿಕೆಟ್ ಬಗ್ಗೆ ಮಾಡಿದ ಟ್ವೀಟ್ನಿಂದ ಜನಸಂದಣಿ ಹೆಚ್ಚಾಗಿ, ಗೇಟ್ಗಳ ಬಳಿ ನಿಯಂತ್ರಣ ತಪ್ಪಿತ್ತು.
ಅಷ್ಟೆ ಅಲ್ಲದೆ, ಕಾಲ್ತುಳಿತ ಸಂಭವಿಸಿದ ಸಮಯದಲ್ಲಿ ಗೇಟ್ಗಳ ಬಳಿ ಪೊಲೀಸರು ಇಲ್ಲದೇ ಹೋಗಿದ್ದು, ಬಂದೋಬಸ್ತ್ ನಲ್ಲಿ ಅನೇಕ ಲೋಪಗಳು ನಡೆದವು ಎಂಬ ಮಾಹಿತಿ ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ. KSRP ಸಿಬ್ಬಂದಿಗೂ ಸರಿಯಾದ ಸೂಚನೆ, ನಿಯೋಜನೆ ಅಥವಾ ರೋಲ್ಕಾಲ್ ಆಗಿಲ್ಲ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಐಡಿ ವರದಿ ತಯಾರಿ
ಸಿಐಡಿ ತಂಡವು ಈ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ, ತನ್ನ ಅಂತಿಮ ವರದಿಗೆ ಸೇರಿಸಿಕೊಳ್ಳುತ್ತಿದೆ. ಸಾರ್ವಜನಿಕರ ರಕ್ಷಣೆಗೆ ಬೇಕಾದ ಎಚ್ಚರಿಕೆ ಕ್ರಮಗಳು ಏನು ಎಂಬುದರ ಕುರಿತು ಈ ವರದಿ ಆಧಾರವಾಗಲಿರುವ ನಿರೀಕ್ಷೆ ಇದೆ.