ಮಂಗಳೂರು : ಇಡೀ ವಿಶ್ವದಲ್ಲಿ ಕೊರೋನಾದ್ದೇ ಮಾತು. ಎಲ್ಲಾ ಚೆನ್ನಾಗಿ ನಡೆದುಕೊಂಡು ಹೋಗುತ್ತಿರುವ ಅಟ್ಟಕಾಯ್ಸ್ಕಿಕೊಂಡ ಈ ಹೆಮ್ಮಾರಿ ವೈರಸ್ ಮಾನವ ಸಮುದಾಯವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ದೇಶ ದೇಶ , ರಾಜ್ಯ ರಾಜ್ಯಗಳ ಗಡಿಯನ್ನು ಬಂದ್ ಮಾಡಿ ಸಂಪರ್ಕ ಕಡಿತಗೊಂಡಿರುವ ಪರಿಣಾಮ ಎಲ್ಲರೂ ಹೈರಾಣಾಗಿದ್ದೇವೆ.
ಅದೇ ರೀತಿ ಗಡಿಬಂದ್ ದೆಸೆಯಿಂದ ಕೊರೋನಾ ಚಿಕಿತ್ಸೆಗಾಗಿ ಕರ್ನಾಟಕಕ್ಕೆ ಬರಲಾಗದೆ, ಆ ಕಡೆ ಕಾಸರಗೋಡಿನಲ್ಲೂ ಸೌಲಭ್ಯ ಸರಿಯಾಗಿ ಸಿಗದೆ ಪರಿತಪಿಸುತ್ತಿದ್ದ ಗಡಿನಾಡು ಕನ್ನಡಿಗರು ಸೇರಿದಂತೆ ಕಾಸರಗೋಡು ಮಂದಿ ನೆಮ್ಮದಿಯಿಂದ ಇರುವಂತಾಗಿದೆ. ಅದಕ್ಕೆ ಕಾರಣ ಟಾಟಾ ಸಂಸ್ಥೆಯ ಆಸ್ಪತ್ರೆ.
ಹೌದು, ಕಾಸರಗೋಡಿನ ಚಟ್ಟಂಚಾಲ್ ನಲ್ಲಿನ ತೆಕ್ಕಿಲ್ ಎಂಬಲ್ಲಿ ಟಾಟಾ ಸಮೂಹ ಸಂಸ್ಥೆಯ ಕೋವಿಡ್ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಸದ್ಯ ಆ ಆಸ್ಪತ್ರೆ ಕೊನೆಯ ಹಂತದ ನಿರ್ಮಾಣ ಸ್ಥಿತಿಯಲ್ಲಿದೆ. ಆಸ್ಪತ್ರೆ ಕಾಮಗಾರಿಯನ್ನು ಏಪ್ರಿಲ್ 28ರಂದು ನಿರ್ಮಾಣ ಕಾರ್ಯ ಆರಂಭಿಸಲಾಗಿದ್ದು, ಈ ತಿಂಗಳ ಅಂದರೆ ಜುಲೈನ ಅಂತ್ಯಕ್ಕೆ ಕೇರಳ ಸರ್ಕಾರಕ್ಕೆ ಆಸ್ಪತ್ರೆಯನ್ನು ಬಿಟ್ಟುಕೊಡಲಾಗುತ್ತದೆ ಎಂದು ತಿಳಿದುಬಂದಿದೆ.
ಸುಮಾರು 15 ಎಕರೆ ಪ್ರದೇಶದಲ್ಲಿ 60 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಆಸ್ಪತ್ತೆ ನಿರ್ಮಾಣವಾಗುತ್ತಿದ್ದು, ಆಸ್ಪತ್ರೆಯನ್ನು ಕೊವಿಡ್ ರೋಗಿಗಳಿಗೇ ಮೀಸಲಿಡಲಾಗುತ್ತದೆ.
ಒಟ್ಟು 128 ಯುನಿಟ್‌ಗಳ ಆಸ್ಪತ್ರೆಯಲ್ಲಿ 540 ಬೆಡ್‌ಗಳಿವೆ. ಒಂದೊಂದು ಯುನಿಟ್‌ನಲ್ಲಿ ತಲಾ ಐದು ಬೆಡ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಸುಸಜ್ಜಿತ ಶೌಚಾಲಯ, ಐಸೋಲೇಷನ್ ವಾರ್ಡ್ ,ಕೊವಿಡ್ ಕೇರ್ ವಾರ್ಡ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
ವೈದ್ಯರು, ದಾದಿಯರು, ಸ್ವಾಗತ ಕೊಠಡಿ, ಕ್ಯಾಂಟಿನ್ ಸಹ ರೆಡಿಯಾಗಿದೆ..
ಮೂರು ವಲಯಗಳಾಗಿ ಆಸ್ಪತ್ರೆಯನ್ನು ವಿಂಗಡಿಸಲಾಗಿದ್ದು, ಒಂದರಿಂದ ಮೂರನೇ ವಲಯದಲ್ಲಿ ಕ್ವಾರಂಟೈನ್ ಬೆಡ್, ಎರಡನೇ ವಲಯದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆಗೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಉತ್ತರ ಭಾರತದ 50ಕ್ಕೂ ಅಧಿಕ ಕಾರ್ಮಿಕರು, ಯಂತ್ರೋಪಕರಣ ಬಳಸಿ ಇದನ್ನು ನಿರ್ಮಿಸಿದ್ದು, ದೇಶದ ವಿವಿಧ ಭಾಗಗಳಲ್ಲಿರುವ ಟಾಟಾ ಉದ್ದಿಮೆಯ ಪ್ಲಾಂಟ್‌ಗಳಿಂದ ಯುನಿಟ್‌ಗಳನ್ನು ಸಿದ್ಧಪಡಿಸಿ ಜೋಡಿಸಿದ್ದಾರೆ…
ಟಾಟಾ ಕಂಪನಿ ಸ್ವಂತ ಹಣ ವ್ಯಯಿಸಿ ಆಸ್ಪತ್ರೆಯನ್ನು ನಿರ್ಮಿಸಿದ್ದು, ಅಗತ್ಯ ವೈದ್ಯರು, ಸಿಬ್ಬಂದಿಯನ್ನು ಕೇರಳ ಸರ್ಕಾರವೇ
ನೇಮಿಸುತ್ತದೆ.
ಯುದ್ಧ ಕಾಲದಲ್ಲಿ ಟಾಟಾ ಗ್ರೂಪ್‌ನವರು ಸೈನಿಕರ ಬಳಕೆಗೆಂದು ಇದೇ ಮಾದರಿಯಲ್ಲಿ ಆಸ್ಪತ್ರೆ ನಿರ್ಮಿಸಿತ್ತು ಅನ್ನೋದನ್ನು ಈ ವೇಳೆ ಸ್ಮರಿಸಬಹುದು.
ಗಡಿನಾಡಿನ ಊರುಗಳ ಜನರು ಮೊದಲು ಮಂಗಳೂರು ಆಸ್ಪತ್ರೆ ಬಂದು ಹೋಗುತ್ತಿದ್ದರು . ದಿನ ಕಡಿಮೆ ಅಂದ್ರು 500 ಮಂದಿ ಮಂಗಳೂರಿನ ಬೇರೆ ಬೇರೆ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗಿ ಬರುತ್ತಿದ್ದರು. ಈಗ ರಾಷ್ಟ್ರೀಯ ಹೆದ್ದಾರಿ ತಲಪಾಡಿ ಸೇರಿದಂತೆ 17 ಕ್ಕೂ ಹೆಚ್ಚಿನ ಗಡಿ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಜನರಿಗೆ ತೊಂದರೆ ಆಗಿತ್ತು. ಇದೀಗ ಟಾಟಾದ ಆಸ್ಪತ್ರೆ ಸೇವೆಯಿಂದ ಜನ ನಿರಾಳರಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಕಾಮಗಾರಿ ಮುಗಿದು ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತದೆ. ಆಮೇಲೆ ಸರ್ಕಾರ ಕೊರೋನಾ ಸೋಂಕಿತರಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಿದೆ.