ಕಿರಣ್ ಬೇಡಿ ‘ಕ್ರೇನ್ ಬೇಡಿ’ ಆಗಿದ್ದೇಗೆ?

Date:

ಒಬ್ಬ ಮಹಿಳೆಗೆ ಕೇವಲ ನಾಲ್ಕು ಗೋಡೆ ಮಧ್ಯೆ ಬದುಕು ಸವೆಸುವುದೇ ಜೀವನವಲ್ಲ. ಬದುಕಿನಲ್ಲಿ ಏನಾದರೂ ಸಾಧಿಸಿ ತೋರಿಸೋದು ಧೀರ ಮಹಿಳೆಯ ದಿಟ್ಟಗುಣ. ಅದು ಯಾವ್ದೇ ಕ್ಷೇತ್ರವಿರಲಿ, ಗೃಹಿಣಿಯಾಗಿ, ಮಗಳಿಗೆ ತಾಯಿಯಾಗಿ, ಪೊಲೀಸ್ ಅಧಿಕಾರಿಯಾಗಿ, ಸಾರ್ವಜನಿಕರ ಸೇವಕಿಯಾಗಿ ಮತ್ತೆ ಚುನಾವಣಾ ರಾಜಕೀಯನಾಯಕಿಯಾಗಿ ಬೆಳೆಯುವುದೆಂದ್ರೆ ಅದು ಸಾಮಾನ್ಯದ ಮಾತೇ? ಅದನ್ನು ಮಾಡಿ ತೋರಿಸಿ ಮತ್ತೊಬ್ಬರಿಗೆ ಮಾರ್ಗದರ್ಶಿಕರಾಗಿ, ಅದರಲ್ಲೂ ಮಹಿಳೆಗೆ ಆದರ್ಶ ಪ್ರಾಯರಾಗಿದ್ದಾರೆ. ಹಾಗಾದ್ರೆ ಆ ಮಹಿಳೆ ಯಾರು..? ಯೋಚನೆ ಮಾಡ್ತಾ ಇದ್ದೀರಾ ಅನ್ಸುತ್ತೆ..! ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೊದಲ ಮಹಿಳಾ ಐಪಿಎಸ್ ಯಾರೆಂದು ಕೇಳಿದರೆ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ಇವರ ಹೆಸರು ಎಲ್ಲರಿಗೂ ಗೊತ್ತು. ಅವರೇ ಕಿರಣ್ ಬೇಡಿ. ಇವರ ಹೆಸರು ಕೇಳಿದಾಕ್ಷಣ ನೆನಪಿಗೆ ಬರೋದು ಧೈರ್ಯ, ಶಿಸ್ತು ಮತ್ತು ಅವರ ಮಾತಿನ ಧಾಟಿ. ಕರ್ತವ್ಯ ಪರಿಪಾಲನೆಯಲ್ಲಿ ಪ್ರತಿಯೊಬ್ಬರಿಗೂ ಕಿರಣ್ ಬೇಡಿ, ಆದರ್ಶ ಮಹಿಳೆ. ‘ದೇಶ ಸೇವೆಯೇ ಈಶ ಸೇವೆ’ ಅನ್ನುವ ಘೋಷ ವಾಕ್ಯವನ್ನು ಭಕ್ತಿಯಿಂದ ಪರಿಪಾಲನೆ ಮಾಡುವುದರೊಂದಿಗೆ, ಭಾರತೀಯ ಪೊಲೀಸ್ ಸೇವೆಯಲ್ಲಿ ಉನ್ನತ ಅಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ್ದಾರೆ. ಜೊತೆ ಜೊತೆಗೆ ಸಾಮಾಜಿಕ, ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಪ್ರಸಿದ್ಧಿಯಾಗಿದ್ದಾರೆ.ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದರೊಂದಿಗೆ ದೇಶದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ಮಟ್ಟಹಾಕಲು ಕಿರಣ್ ಬೇಡಿಯವರ ಪಾತ್ರ ಶ್ಲಾಘನೀಯ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಯಾಗ ಬಯಸುವ ಪ್ರತಿಯೊಬ್ಬ ಮಹಿಳೆಯರಿಗೂ ಈ ಗಂಡೆದೆಯ ಹೆಣ್ಣು ಮಾದರಿಯಾಗಿ ನಿಲ್ಲುತ್ತಾರೆ.ಪಂಜಾಬ್ ನ ಅಮೃತಸರದಲ್ಲಿ 1949ರ ಜೂನ್ 9 ರಂದು ಜನಿಸಿದ ಕಿರಣ್ ಬೇಡಿ ಕಾನೂನಿನಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕೆಲವು ದಿನಗಳ ಕಾಲ ಕಾನೂನು ಉಪನ್ಯಾಸಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ನಂತರ ಐಪಿಎಸ್ ಹುದ್ದೆಗೆ ಆಯ್ಕೆಯಾಗುವುದರ ಮೂಲಕ ಸುಮಾರು ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರದ ರಾಜಧಾನಿ ದೆಹಲಿ ಮಾತ್ರವಲ್ಲ, ದೇಶದ ಹಲವಡೆಯೂ ದಿಟ್ಟತನದಿಂದ ಕೆಲಸ ಮಾಡಿದ್ದಾರೆ.ಮಾದಕದ್ರವ್ಯ, ಸಂಚಾರ ಮತ್ತು ನಿಯಂತ್ರಣ, ವಿಐಪಿ ರಕ್ಷಣೆ, ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಬದಲಾವಣೆ ತರುವುದರ ಮೂಲಕ ಪ್ರಮುಖ ಪಾತ್ರವಹಿಸಿದ್ದಾರೆ. ಇನ್ನು ದೆಹಲಿಯ ಕೇಂದ್ರ ಕಾರಾಗೃಹದ ಮುಖ್ಯಸ್ಥೆಯಾಗಿದ್ದ ಕಿರಣ್ ಬೇಡಿ, ಖೈದಿಗಳ ದಿನಚರಿಯಲ್ಲಿ ಬದಲಾವಣೆ ತರುವ ಮೂಲಕ ಸಮಗ್ರ ಸುಧಾರಣೆಯನ್ನು ಪ್ರಪ್ರಥಮವಾಗಿ ಭಾರತೀಯ ಜೈಲುಗಳಲ್ಲಿ ಪರಿಚಯಿಸಿದ ಹೆಗ್ಗಳಿಕೆಯೂ ಇದೆ.ಇನ್ನು ಕಿರಣ್ ಬೇಡಿಯವರು ದೆಹಲಿಯಂತೆ ತಿಹಾರ್ ಜೈಲಿನ ಮುಖ್ಯಸ್ಥರಾಗಿದ್ದಾಗ ಅಲ್ಲೂ ಜಾರಿಗೊಳಿಸಿದ ಸುಧಾರಣಾ ಕ್ರಮಗಳು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದ್ದು, ಖೈದಿಗಳು ಕೂಡ ಮನುಷ್ಯರೇ, ಅವರಲ್ಲೂ ಪರಿವರ್ತನೆ ತರುವುದು ಸಾಧ್ಯ ಎಂಬುವುದನ್ನು ಪ್ರತಿಪಾದಿಸಿದರು.

ದೆಹಲಿಯ ಟ್ರಾಫಿಕ್​​ ಪೊಲೀಸ್ ಆಯುಕ್ತೆ, ಮಿಜೋರಾಂನ ಡಿಜಿಪಿ, ಚಂಡೀಗಡದ ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರ್ತಿ, ಮಾದಕ ವಸ್ತು ನಿಯಂತ್ರಣ ಮಂಡಳಿಯ ಡಿಜಿ, ತಿಹಾರ್ ಜೈಲಿನ ಮುಖ್ಯಸ್ಥೆ ಸೇರಿದಂತೆ ಇನ್ನಿತರ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕರ್ತವ್ಯ ನಿಷ್ಠೆ ವಿಷಯ ಬಂದಾಗ ದೆಹಲಿ ಜನ ಅವರನ್ನು ನೆನಪಿಸೋದು ‘ಕ್ರೇನ್ ಬೇಡಿ’ ಎಂದೇ..! ಅವರು ದೆಹಲಿಯ ಸಂಚಾರ ನಿಯಂತ್ರಣ ವಿಭಾಗದಲ್ಲಿದ್ದಾಗ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಕಾರನ್ನೇ ಎತ್ತೊಯ್ದಿದ್ದರು.

ಹೀಗಾಗಿ ಅವರಿಗೆ ‘ಕ್ರೇನ್ ಬೇಡಿ’ ಎಂಬ ಅಡ್ಡ ಹೆಸರು ಬಿತ್ತು. ಅದು ಈಗಲೂ ಪ್ರಚಲಿತ.ಓರ್ವ ಮಹಿಳಾ ಉನ್ನತ ಪೊಲೀಸ್ ಅಧಿಕಾರಿಯಾಗಿಯೂ ಅವರ ಹುದ್ದೆಗಳ ಬಡ್ತಿ ವಿಚಾರದಲ್ಲಿ ಸಚಿವರ ಹಾಗೂ ರಾಜಕಾರಣಿಗಳ ಹಸ್ತಕ್ಷೇಪ ಹಲವು ಬಾರಿ ನಡೆದಾಗ ಖಾಕಿ ವರ್ದಿಗೆ ಸಲಾಮ್ ಹೊಡೆದು ಸ್ವಯಂ ನಿವೃತ್ತಿ ಪಡೆದು ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರುದ್ಧದ ಚಳುವಳಿಯಲ್ಲಿ ಕಿರಣ್ ಬೇಡಿ ಧುಮುಕಿದರು.ನವಜಯೋಟಿ ಮತ್ತು ಇಂಡಿಯಾ ವಿಷನ್ ಫೌಂಡೇಶನ್ ಎಂಬ ಎರಡು ಸರ್ಕಾರೇತರ ಸಂಸ್ಥೆಗಳನ್ನು ಸ್ಥಾಪಿಸಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಅಷ್ಟೇ ಏಕೆ ಪರಿಸರದ ಬಗ್ಗೆ ಕಾಳಜಿಯನ್ನು ತೋರುತ್ತ ಎಲ್ಲರಿಂದಲೂ ಪ್ರಶಂಸೆಗೂ ಪಾತ್ರರಾಗಿದ್ದಾರೆ.

ಜೊತೆಗೆ ಕಾರಾಗೃಹದಲ್ಲಿ ಬಂಧಿತರಾಗಿರುವ ಕೈದಿಗಳ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ತಮ್ಮ ಸಂಸ್ಥೆಯ ಮೂಲಕ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ವಿಶ್ವಸಂಸ್ಥೆ ಪದಕವನ್ನು ನೀಡಿದೆ. ಅಂತಾರಾಷ್ಟ್ರೀಯ ಪ್ರಶಸ್ತಿಯಾದ ರಾಮ್ ಮ್ಯಾಗ್ಸೇಸೆ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ದಿಟ್ಟ ಪೊಲೀಸ್ ಅಧಿಕಾರಿ, ಸಾರ್ವಜನಿಕರ ಸೇವಕಿಯಾಗಿ ಕೆಲಸ ಮಾಡಿದ್ದ , ಅನ್ಯಾಯ, ಅ್ರಕಮ ಎದುರಾದಾಗ ಸೆಟೆದು ನಿಂತು ಹೋರಾಟ ನಡೆಸಿದ ಕಿರಣ್ ಬೇಡಿಯವರು ಸದ್ಯ ಪುದುಚೇರಿಯ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಬಹುಮುಖಿ, ಸಮಾಜಮುಖಿ ಕೆಲಸ ಇತರರಿಗೂ ಆದರ್ಶವಲ್ಲವೇ?

Share post:

Subscribe

spot_imgspot_img

Popular

More like this
Related

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ ತಾತ್ಕಾಲಿಕ...

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಜಾಗತಿಕವಾಗಿ...

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ತುಳಸಿ ಟೀ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಭಾರತದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುವ ತುಳಸಿ...