ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು ಎಂದು ಸಿ.ಎಂ.ಸಿದ್ದರಾಮಯ್ಯ ಅವರು ತಿಳಿಸಿದರು. ಗಾಂಧಿನಗರದಲ್ಲಿ ಪ್ರದೇಶ ಕುರುಬರ ಸಂಘ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಾನು ಕೇವಲ ಕುರುಬ ಸಮಾಜಕ್ಕೆ ಮಾತ್ರ ಇಷ್ಟು ಮಾಡಲಿಲ್ಲ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿ ಎಲ್ಲಾ ಶೋಷಿತ ಸಮುದಾಯಗಳ ಏಳಿಗೆಗೂ ನಾನು ಕೆಲಸ ಮಾಡಿದ್ದೇನೆ. ಮೊದಲ ಬಾರಿ ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಭಾಗ್ಯಗಳು, ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಜಾರಿಗೆ ತಂದ ಗ್ಯಾರಂಟಿಗಳು ಎಲ್ಲಾ ಜಾತಿಯ ಬಡವರಿಗಾಗಿ ಜಾರಿ ಆಗಿದೆ. ಸರ್ವರನ್ನೂ ಒಳಗೊಂಡ, ಸರ್ವರ ಅಭಿವೃದ್ಧಿಯ ಸಮಾಜ ನಿರ್ಮಾಣ ನನ್ನ ಗುರಿ ಎಂದರು. ಅದಕ್ಕೇ ರಾಜ್ಯದ ಎಲ್ಲಾ ಜಾತಿಯ, ಎಲ್ಲಾ ವರ್ಗದ, ಎಲ್ಲಾ ಧರ್ಮದ ಜನರೂ ನನ್ನನ್ನು ಪ್ರೀತಿಸ್ತಾರೆ. ಹೀಗಾಗಿ ನಾನು ನಮ್ಮ ಜಾತಿ ಸೇರಿ ಸಮಾಜದ ಎಲ್ಲಾ ಜಾತಿ, ಧರ್ಮದವರ ಆಶೀರ್ವಾದಕ್ಕಾಗಿ ನಾನು ಋಣಿ ಎಂದು ಕೃತಜ್ಞತೆ ಸಲ್ಲಿಸಿದರು.
ಸಂಘದ ಕಟ್ಟಡದಲ್ಲಿ ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು. ಸಮಾಜವನ್ನು ಒಡೆದು ಜಾತಿ ವ್ಯವಸ್ಥೆ ರೂಪಿಸಿದ ಸಿದ್ಧಾಂತ RSS ನದ್ದು. ಈ ಸಿದ್ಧಾಂತ ಶ್ರಮಿಕ ಜಾತಿ, ವರ್ಗಗಳ ವಿರೋಧಿ. ಅದಕ್ಕೇ ನಾನು RSS ಅನ್ನು ಮೊದಲಿನಿಂದಲೂ ವಿರೋಧಿಸುತ್ತೇನೆ. ಇದೇ ಕಾರಣಕ್ಕೆ ಕಾಗಿನೆಲೆ ಪೀಠ ಎಲ್ಲಾ ಶೋಷಿತ ಸಮುದಾಯಗಳ ಪೀಠ ಆಗಬೇಕು ಎನ್ನುವುದನ್ನು ಪ್ರತಿಪಾದಿಸಿದ್ದೆ ಎಂದರು.
ಈದ ಇದೇ ನೂರು ವರ್ಷದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರದೇಶ ಕುರುಬರ ಸಂಘದಿಂದ ಬೇಡಿಕೆ ಮತ್ತು ಒತ್ತಾಯ ಬಹಳ ವರ್ಷಗಳಿಂದ ಇತ್ತು. ಈಗ ಎಲ್ಲರನ್ನೂ ಒಪ್ಪಿಸಿ ಹಳೆ ಕಟ್ಟಡ ನೆಲಸಮ ಮಾಡಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಕೂಡ ಆಗಿದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ 18 ತಿಂಗಳಲ್ಲಿ ನೂತನ ಕಟ್ಟಡ ನಿರ್ಮಾಣ ಆಗಲಿದೆ ಎಂದರು.






