ಮೊಹಮ್ಮದ್ ಸಿರಾಜ್ ಬೆಳೆಯುತ್ತಿರುವ ಪ್ರತಿಭೆ. ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದಾಗ ಕಳಪೆ ಪ್ರದರ್ಶನ ನೀಡುವುದರ ಮೂಲಕ ಸಾಲು ಸಾಲು ಟೀಕೆಗಳಿಗೆ ಗುರಿಯಾಗಿದ್ದ ಮೊಹಮ್ಮದ್ ಸಿರಾಜ್ 2020ರ ಐಪಿಎಲ್‌ನಿಂದ ತನ್ನ ಬೌಲಿಂಗ್ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಉತ್ತಮ ಪ್ರದರ್ಶನವನ್ನು ನೀಡಲಾರಂಭಿಸಿದರು.
ಕಳೆದ ಬಾರಿಯ ಐಪಿಎಲ್ ಟೂರ್ನಿಯ ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿತ್ತು. ಈ ಪ್ರವಾಸಕ್ಕೆ ಮೊಹಮ್ಮದ್ ಸಿರಾಜ್ ಕೂಡ ಆಯ್ಕೆಯಾದರು. ತುಂಬಾ ದಿನಗಳಿಂದ ಟೆಸ್ಟ್ ಕ್ರಿಕೆಟ್‍ನಲ್ಲಿ ಆಡಬೇಕೆಂಬ ಕನಸನ್ನು ಹೊತ್ತಿದ್ದ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ಪಡೆದು ಉತ್ತಮ ಪ್ರದರ್ಶನ ನೀಡಿದರು. ಆ ಸರಣಿಯಲ್ಲಿ 13 ವಿಕೆಟ್ ಪಡೆದು ಮಿಂಚಿದ ಮೊಹಮ್ಮದ್ ಸಿರಾಜ್ ಆಗಿನಿಂದ ತಂಡದ ಪ್ರಮುಖ ಬೌಲರ್ ಎನಿಸಿಕೊಂಡಿದ್ದಾರೆ.
ಇದೀಗ ಇಂಗ್ಲೆಂಡ್ ಪ್ರವಾಸಕ್ಕೂ ಕೂಡ ಆಯ್ಕೆಯಾಗಿರುವ ಮೊಹಮ್ಮದ್ ಸಿರಾಜ್ ಐಪಿಎಲ್ ವೇಳೆಯಲ್ಲಿ ವಿರಾಟ್ ಕೊಹ್ಲಿ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ. ‘ಎರಡು ವರ್ಷಗಳ ಹಿಂದೆ ನಾನು ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದೆ. ಆದರೂ ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಬೆಂಗಳೂರು ತಂಡದಲ್ಲಿಯೇ ಉಳಿಸಿಕೊಂಡರು. ಕೊಹ್ಲಿ ಮಾಡಿದ ಈ ಸಹಾಯಕ್ಕೆ ನಾನು ಎಂದಿಗೂ ಋಣಿಯಾಗಿರುತ್ತೇನೆ’ ಎಂದು ಮೊಹಮ್ಮದ್ ಸಿರಾಜ್ ವಿರಾಟ್ ಕೊಹ್ಲಿ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.