ದೇಶದಾದ್ಯಂತ ಕೊರೊನಾವೈರಸ್ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಸೋಂಕಿತರು ಹೆಚ್ಚಾದಷ್ಟು ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಆಕ್ಸಿಜನ್ ಕೊರತೆ ಉಂಟಾಗುತ್ತಿದ್ದು ಸೋಂಕಿತರು ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಹೀಗೆ ದೇಶ ಕೊರೊನಾವೈರಸ್ ವಿರುದ್ಧ ಹೋರಾಡುತ್ತಿದ್ದು ಈ ಹೋರಾಟಕ್ಕೆ ಈಗಾಗಲೇ ಕೆಲ ಕ್ರಿಕೆಟಿಗರು ಮತ್ತು ಐಪಿಎಲ್ ತಂಡಗಳು ಆರ್ಥಿಕ ನೆರವನ್ನು ನೀಡಿವೆ.
ಈ ಹಿಂದೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರು ಕೊರೊನಾ ವಿರುದ್ಧದ ಹೋರಾಟಕ್ಕೆ 30 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದರು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ದೊಡ್ಡ ಮೊತ್ತವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆಯಾಗಿ ನೀಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲ ಸಂಸ್ಥೆಯಾಗಿರುವ ಡಿಯಾಜಿಯೊದ ಸಿಇಒ ಆನಂದ್ ಕೃಪಾಲು 45 ಕೋಟಿ ರೂಪಾಯಿಗಳನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ದೇಣಿಗೆಯಾಗಿ ಘೋಷಿಸಿದ್ದಾರೆ. ದೇಶದ ವಿವಿಧ ರಾಜ್ಯಗಳಿಗೆ ಕೊರೊನಾ ಚಿಕಿತ್ಸೆಗೆ ಬೇಕಾಗುವ ವೈದ್ಯಕೀಯ ಸಲಕರಣೆ ಮತ್ತು ಆಕ್ಸಿಜನ್ ಒದಗಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧ್ಯಕ್ಷ ಆನಂದ್ ಕೃಪಾಲು ಇಷ್ಟು ದೊಡ್ಡ ಮೊತ್ತವನ್ನು ನೀಡಿದ್ದಾರೆ.
ದೇಶ ಕಷ್ಟದಲ್ಲಿರುವ ಇಂತಹ ಸಮಯದಲ್ಲಿ, ದೇಶದ ಪರ ನಿಂತು ವೈರಸ್ ವಿರುದ್ಧ ಹೋರಾಡುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ದೇಶದ ವಿವಿಧ ಭಾಗಗಳಲ್ಲಿ ಬೇಕಾಗಿರುವ ವೈದ್ಯಕೀಯ ಸವಲತ್ತುಗಳು, ಬೆಡ್ ಮತ್ತು ಆಕ್ಸಿಜನ್ ಒದಗಿಸಲು ಈ ದೇಣಿಗೆ ನೀಡುತ್ತಿರುವುದಾಗಿ ಆನಂದ್ ಕೃಪಾಲು ತಿಳಿಸಿದ್ದಾರೆ.