ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳ ಟಿ.20 ಸರಣಿಯನ್ನು ಸೋತು. ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದು, ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡು ಟಿ20 ಸೋಲಿನ ಸೇಡನ್ನು ತೀರಿಸಿಕೊಳ್ಳಲು ರೆಡಿಯಾಗಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನಂತರ ಎರಡೂ ಪಂದ್ಯಗಳನ್ನೂ ಸೋತಿದೆ.
ಮೊದಲ ಎರಡು ಪಂದ್ಯಗಳನ್ನು ಗೆದ್ದು, ಮತ್ತೆರಡು ಪಂದ್ಯಗಳನ್ನು ಸೋತ ಭಾರತ ಇಂದು ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ತವಕದಲ್ಲಿದೆ.
ಅತ್ತ ಆಸೀಸ್ ಮತ್ತೆ ಗೆಲುವಿನ ಹಳಿಗೆ ಮರಳಿದ್ದು, ಈ ಪಂದ್ಯವನ್ನೂ ಗೆದ್ದು ಹ್ಯಾಟ್ರಿಕ್ ಗೆಲುವಿನೊಂದಿಗೆ ಸರಣಿಯನ್ನು ಕೈವಶ ಮಾಡಿಕೊಳ್ಳಲು ಎದುರು ನೋಡುತ್ತಿದೆ.
ಈಗ 2-2 ರಲ್ಲಿ ಸರಣಿ ಸಮಬಲದಲ್ಲಿದೆ. ಕ್ಲೈಮ್ಯಾಕ್ಸ್ ಕಾಳಗಕ್ಕೆ ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ ವೇದಿಕೆಯಾಗಿದೆ.
ಭಾರತಕ್ಕೆ ಸರಣಿ ಗೆದ್ದು ಮರ್ಯಾದೆ ಉಳಿಸಿಕೊಳ್ಳುವ ಸ್ಥಿತಿ ಇದ್ದರೆ, ಆಸೀಸ್ ಗೆ ಈ ಪಂದ್ಯವನ್ನೂ ಗೆದ್ದು ಏಕದಿನ ಸರಣಿಯನ್ನೂ ಕೂಡ ತನ್ನದಾಗಿಸಿಕೊಳ್ಳುವ ತವಕ.
ಕೋಟ್ಲಾದಲ್ಲಿ ಭಾರತ ಇದುವರೆಗೆ 8 ಪಂದ್ಯಗಳನ್ನು ಗೆದ್ದಿದ್ದು 4 ಪಂದ್ಯಗಳನ್ನು ಸೋತಿದೆ. ಆಸೀಸ್ ಇದುವರೆಗೆ 4 ಪಂದ್ಯಗಳನ್ನು ಆಡಿದ್ದು 3 ರಲ್ಲಿ ಜಯ ಕಂಡಿದೆ.1 ರಲ್ಲಿ ಸೋತಿದೆ.
ಒಟ್ಟಾರೆ ಭಾರತ ಮತ್ತು ಆಸೀಸ್ ಇದುವರೆಗೆ 135 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 49 ಪಂದ್ಯಗಳನ್ನು ಗೆದ್ದಿದೆ. ಆಸೀಸ್ 76ರಲ್ಲಿ ಜಯಸಾಧಿಸಿದೆ. 10 ಪಂದ್ಯಗಳ ಫಲಿತಾಂಶವಿಲ್ಲ.
ಭಾರತಕ್ಕೆ ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿ ಕಾಡಲಿದೆ. ಇನ್ನುಳಿದಂತೆ ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ , ಧವನ್ ಬಲವಿದೆ. ನಾಯಕ ವಿರಾಟ್ ಕೊಹ್ಲಿ ಕೂಡ ಅಬ್ಬರಿಸಿ ನೆರವಾಗುವ ವಿಶ್ವಾಸದಲ್ಲಿದ್ದಾರೆ. ರಾಹುಲ್, ಪಂತ್ ಮೇಲೆ ನಿರೀಕ್ಷೆ ಹೆಚ್ಚಿದೆ.
ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗುತ್ತದೆ.
ಕೋಟ್ಲಾದಲ್ಲಿ ಕ್ಲೈಮ್ಯಾಕ್ಸ್ ಕಾಳಗ-ಗೆಲ್ಲೋರ್ಯಾರು, ಸೋಲೋರ್ಯಾರು?
Date: