ಖ್ಯಾತ ಕನ್ನಡ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಡಾ. ಪಂಚಾಕ್ಷರಿ ಹಿರೇಮಠ ವಿಧಿವಶ!
ಖ್ಯಾತ ಕನ್ನಡ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಡಾ. ಪಂಚಾಕ್ಷರಿ ಹಿರೇಮಠ (92) ಅವರು ವಿಧಿವಶರಾಗಿದ್ದಾರೆ. ಕೊಪ್ಪಳ ಜಿಲ್ಲೆ ಬಿಸರಹಳ್ಳಿಯಲ್ಲಿ 1933 ಜನವರಿ 6ರಂದು ಜನಿಸಿದ್ದ ಡಾ.ಪಂಚಾಕ್ಷರಿಯವರು ರಾಷ್ಟ್ರೀಯ ಚಳುವಳಿಯ ಪ್ರಭಾವಕ್ಕೊಳಗಾಗಿ ತಮ್ಮ ಶಿಕ್ಷಣವನ್ನು ಅರ್ಧದಲಿಯೇ ಮೊಟಕುಗೊಳಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಧುಮುಕಿದರು.
ಹೀಗಾಗಿ, ನಾಲ್ಕು ಗೋಡೆಗಳ ನಡುವಿನ ಅವರ ಶಿಕ್ಷಣ ಅರ್ಧದಲ್ಲಿಯೇ ನಿಂತುಹೋಯಿತು. ಬಹುಮುಖ ವ್ಯಕ್ತಿತ್ವದ ಪ್ರೊ. ಪಂಚಾಕ್ಷರಿಯವರು ಜೀವನದ ಅನೇಕ ರಂಗಗಳಲ್ಲಿ ತಮ್ಮನ್ನು ತಾವು ಕ್ರೀಯಾಶೀಲವಾಗಿ ತೊಡಗಿಸಿಕೊಂಡರು. ಪ್ರೌಢಶಾಲೆಯಲ್ಲಿ ಅವರು ವಿದ್ಯಾರ್ಥಿ ಮುಖಂಡರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತಿಯಾಗಿದ್ದರು.
ಕಾವ್ಯ, ಗದ್ಯ, ಪತ್ರ ಸಾಹಿತ್ಯ, ಸಣ್ಣಕಥೆ, ಸಂಶೋಧನೆ, ಸಂಪಾದನೆ ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸಿದ್ಧಿ ಸಾಧಿಸಿದ್ದ ಇವರು ಬಹುಭಾಷಾ ಕೋವಿದರು. ಹಲವು ಭಾಷೆಗಳಿಂದ ಅನೇಕ ಸಾಹಿತ್ಯ ಕೃತಿ ರತ್ನಗಳನ್ನು ಕನ್ನಡಕ್ಕೆ ಅನುವಾದಿಸಿ, ಜೊತೆಗೆ ಅವುಗಳ ಬಗೆಗೆ ಕನ್ನಡದಲ್ಲಿ ಸ್ವತಂತ್ರವಾಗಿ ಬರೆದು ಭಾಷಾಬಾಂಧವ್ಯಕ್ಕೆ ನಾಂದಿ ಹಾಡಿದ್ದರು.