ಗಣೇಶ ಹಬ್ಬದ ಹಿನ್ನೆಲೆ ಮತ್ತು ಆಚರಣೆ …

Date:

ಗಣೇಶನ ಹಬ್ಬ ಅಥವಾ ಗಣೇಶ ಚತುರ್ಥಿ ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದು.  ಇಂದು ಈ ಬಾರಿಯ ಗೌರಿಹಬ್ಬ ಆಚರಿಸಲಾಗುತ್ತಿದೆ. ನಾಳೆ ಗಣೇಶ ಹಬ್ಬ..

ವಿದ್ಯೆಯ ಮತ್ತು ಜ್ಞಾನದ ಅಧಿಪತಿ, ಸಂಪತ್ತು ಮತ್ತು ಅದೃಷ್ಟದ ಅಧಿನಾಯಕನಾದಂತಹ ನಮ್ಮ ಮೂಷಿಕ ವಾಹನನ ಜನನವನ್ನು ಸಾರುವ ಹಬ್ಬ. ಈ ಹಬ್ಬವನ್ನು ವಿನಾಯಕ ಚತುರ್ಥಿ ಅಥವಾ ಗಣೇಶ ಚತುರ್ಥಿ ಇಲ್ಲವೇ ಚೌತಿ ಎಂದು ಸಹ ಕರೆಯುತ್ತಾರೆ. ಇದನ್ನು ಹಿಂದೂಗಳೆಲ್ಲರು ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಾರೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿರುವ ಜನರು ಇದನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸುತ್ತಾರೆ.

ಗಣೇಶ ಚತುರ್ಥಿಯ ಆರಂಭವು ಮರಾಠರು ತಮ್ಮ ಆಳ್ವಿಕೆಯ ಉತ್ತುಂಗದಲ್ಲಿದ್ದಾಗ ಪ್ರಚಾರಕ್ಕೆ ತಂದರು. ಅದರಲ್ಲಿಯೂ ಮರಾಠರ ಶ್ರೇಷ್ಠ ರಾಜ ಛತ್ರಪತಿ ಶಿವಾಜಿಯು ಇದನ್ನು ಆಚರಿಸಲು ಆರಂಭಿಸಿದನೆಂದು ಇತಿಹಾಸ ಸಾರುತ್ತದೆ. ಗಣೇಶನ ಹಬ್ಬ ಆರಂಭಗೊಳ್ಳಲು ಹಲವಾರು ದಂತ ಕತೆಗಳ ಹಿನ್ನಲೆಯಿದೆ. ಶಿವ-ಪಾರ್ವತಿಯರ ಮಗನಾದ ಗಣೇಶನ ಹುಟ್ಟಿನ ಕುರಿತು ಹಲವಾರು ಕತೆಗಳು ಚಾಲ್ತಿಯಲ್ಲಿವೆ. ಅದರಲ್ಲಿ ಅತ್ಯಂತ ಪ್ರಸಿದ್ಧವಾದ ಕತೆ ಹೀಗಿದೆ. ಗಣಪತಿಗೆ ಜನ್ಮ ನೀಡಿದವಳು ಪಾರ್ವತಿ. ಈಶ್ವರನು ಇಲ್ಲದ ಸಮಯದಲ್ಲಿ ಶ್ರೀಗಂಧದ ಮುದ್ದೆಯಿಂದ ಆಕೆ ಗಣೇಶನನ್ನು ಸೃಷ್ಟಿಸಿ, ತಾನು ಸ್ನಾನಕ್ಕೆ ಹೋಗುತ್ತ ಬಾಗಿಲನ್ನು ಕಾಯುವಂತೆ ತಿಳಿಸಿ ಹೋದಳಂತೆ. ಆಕೆ ಸ್ನಾನಕ್ಕೆ ಹೋದಾಗ ಅಲ್ಲಿಗೆ ಬಂದ ಶಿವನಿಗೆ ಒಳಗೆ ಹೋಗಲು ಗಣಪತಿ ನಿರಾಕರಿಸಿದಾಗ, ಅವರಿಬ್ಬರಿಗೂ ಜಗಳವಾಯಿತಂತೆ. ಈ ಜಗಳದಲ್ಲಿ ಕೋಪಗೊಂಡ ಈಶ್ವರನು ರೌದ್ರಾವತಾರವನ್ನು ತಾಳಿ ಗಣಪತಿಯ ತಲೆಯನ್ನು ಕತ್ತರಿಸಿ ಹಾಕಿದನಂತೆ.

ಆಮೇಲೆ ಅಲ್ಲಿಗೆ ಆಗಮಿಸಿದ ಪಾರ್ವತಿ ದೇವಿಯು ಈ ದೃಶ್ಯವನ್ನು ಕಂಡು ಉಗ್ರಾವತಾರವನ್ನು ತಾಳಿದಳಂತೆ, ಆಗ ಆಕೆ ಕಾಳಿಯ ಅವತಾರವನ್ನು ತಾಳಿ ವಿಶ್ವವನ್ನು ನಾಶಪಡಿಸುವ ಬೆದರಿಕೆಯನ್ನು ಹಾಕಿದಳಂತೆ. ಇದು ಪ್ರತಿಯೊಬ್ಬರನ್ನು ಆತಂಕಕ್ಕೆ ತಳ್ಳಿತಂತೆ. ಆಗ ಎಲ್ಲರೂ ಕಾಳಿಕಾದೇವಿಯ ಕೋಪವನ್ನು ತಣಿಸುವ ಉಪಾಯವನ್ನು ಹುಡುಕುವಂತೆ ಈಶ್ವರನಿಗೆ ಮೊರೆ ಸಲ್ಲಿಸಿದರಂತೆ. ಆಗ ಶಿವನು ತನ್ನ ಅನುಯಾಯಿಗಳಿಗೆ ಹೀಗೆ ಹೇಳಿದನಂತೆ. ಎಲ್ಲಾ ಕಡೆ ಹುಡುಕಿ, ನಿಮ್ಮ ಕಣ್ಣಿಗೆ ಮೊದಲು ಕಾಣಿಸುವ, ಯಾವ ತಾಯಿ ಉದಾಸೀನವಾಗಿ ತನ್ನ ಮಗುವನ್ನು ಬೆನ್ನ ಹಿಂದೆ ಬಿಟ್ಟು ಬಿಟ್ಟು ಇರುತ್ತಾಳೆಯೋ, ಆ ಮಗುವಿನ ತಲೆಯನ್ನು ಕಡಿದು ತನ್ನಿ ಎಂದನಂತೆ. ಹೀಗೆ ಶಿವನ ಅನುಯಾಯಿಗಳು ಹುಡುಕುವಾಗ ಅವರಿಗೆ ಮೊದಲು ಕಾಣಿಸಿದ್ದು ತಾಯಿಯ ಬೆನ್ನ ಹಿಂದೆ ತನ್ನ ಪಾಡಿಗೆ ತಾನಿದ್ದ ಆನೆ ಮರಿ. ಅವರು ಅದನ್ನೇ ಕಡಿದು ತಂದು ಶಿವನಿಗೆ ನೀಡಿದರು. ಇದನ್ನು ನೋಡಿ ಕಾಳಿಕಾ ದೇವಿಯ ಕೋಪವು ತಣ್ಣಗಾಯಿತು. ಪಾರ್ವತಿ ದೇವಿಯು ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಆಗ ಎಲ್ಲಾ ದೇವರುಗಳು ಗಣೇಶನನ್ನು ಆಶಿರ್ವದಿಸಿದರು. ಆ ದಿನವನ್ನು ಗಣೇಶ ಚತುರ್ಥಿ ಎಂದು ಆಚರಿಸಲು ಆರಂಭಿಸಲಾಯಿತು.
ಗಣೇಶ ಚತುರ್ಥಿಯ ಸಿದ್ಧತೆಗಳು ಒಂದು ತಿಂಗಳ ಮೊದಲಿನಿಂದಲೆ ಆರಂಭಗೊಳ್ಳುತ್ತವೆ. ಈ ಹಬ್ಬವು ಸುಮಾರು ಹತ್ತು ದಿನಗಳ ಕಾಲ ನಡೆಯುತ್ತದೆ ( ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ). ಮೊದಲನೆ ದಿನ ಮನೆಗಳಲ್ಲಿ ಗಣೇಶನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುತ್ತದೆ. ಮನೆಗಳನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ದೇವಸ್ಥಾನಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಭಕ್ತಾಧಿಗಳು ಪೂಜೆಯನ್ನು ಸಲ್ಲಿಸುತ್ತಾರೆ. ಪೂಜೆಗಳು, ಭಜನೆಗಳು ನಿರಂತರವಾಗಿ ನಡೆಯುತ್ತವೆ. ಜೊತೆಗೆ ಹಬ್ಬದ ಸಂದರ್ಭದಲ್ಲಿ ಮನೆ ಮಂದಿಯೆಲ್ಲ ಒಂದಾಗಿ ಸೇರುತ್ತಾರೆ. ಸ್ಥಳೀಯ ಸಂಘ ಸಂಸ್ಥೆಗಳು ಪೆಂಡಾಲ್‌ಗಳನ್ನು ಹಾಕಿ ಬೃಹತ್ ಗಣಪತಿಯ ವಿಗ್ರಹಗಳನ್ನು ಇರಿಸುತ್ತಾರೆ. ಈ ಪೆಂಡಾಲ್‌ಗಳಲ್ಲಿ ಗಣಪತಿಯ ಉತ್ಸವವದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ. ಕೊನೆಯ ದಿನದಂದು ಗಣಪತಿಯ ಮೂರ್ತಿಯನ್ನು ಆ ಪ್ರದೇಶದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಗುತ್ತದೆ. ಜನರು ಸಹ ಉತ್ಸಾಹದಿಂದ ಅದರಲ್ಲಿ ಕುಣಿಯುತ್ತಾ ಮತ್ತು ಹಾಡುತ್ತ ಪಾಲ್ಗೊಳ್ಳುತ್ತಾರೆ. ಕೊನೆಗೆ ಗಣಪತಿಯನ್ನು ಹತ್ತಿರದ ಕೆರೆ, ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ.

Share post:

Subscribe

spot_imgspot_img

Popular

More like this
Related

ನಾವು ಬಿಸಾಡುವ ಈ ವಸ್ತುವಿಗಿದೆ ವಿಷ ಸರ್ಪ ಓಡಿಸುವ ಶಕ್ತಿ; ಯಾವುದು?

ನಾವು ಬಿಸಾಡುವ ಈ ವಸ್ತುವಿಗಿದೆ ವಿಷ ಸರ್ಪ ಓಡಿಸುವ ಶಕ್ತಿ; ಯಾವುದು? ನಮ್ಮ...

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ...

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು...

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...