ಕ್ರಿಕೆಟ್ ಜಗತ್ತಿನಲ್ಲಿ ಹೊಸ ಭಾಷ್ಯ ಬರೆದಿದ್ದ ದಿಗ್ಗಜರ ಆಟವನ್ನು ಕಣ್ತುಂಬಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಬೇಸರವಾಗಿದೆ. ವಿಶ್ವಕ್ರಿಕೆಟ್ನಲ್ಲಿ ತಮ್ಮದೇಯಾದ ಚಿರ ಹೆಸರನ್ನು ಅಚ್ಚೊತ್ತಿ ವೃತ್ತಿಪರ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್ನ ಬ್ರಿಯಾಲ್ ಲಾರಾ, ಆಸ್ಟ್ರೇಲಿಯಾದ ಬ್ರೇಟ್ಲೀ, ದ. ಆಫ್ರಿಕಾದ ಜಾಂಟಿರೋಡ್ಸ್ ಹೀಗೆ ವಿಶ್ವಕ್ರಿಕೆಟ್ ಲೋಕದಲ್ಲಿ ಮಿಂಚಿದ್ದ ಕ್ರಿಕೆಟಿಗರು ಮತ್ತೆ ಕಣಕ್ಕಿಳಿದಿದ್ದ ರೋಡ್ಸೇಫ್ಟಿ ಕ್ರಿಕೆಟ್ ಟೂರ್ನಿ ಕೊರೋನಾದಿಂದ ಅರ್ಧಕ್ಕೆ ನಿಂತಿದೆ. ಇಂಡಿಯಾ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್, ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ವೆಸ್ಟ್ ಇಂಡೀಸ್ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ತಂಡಗಳು ಟೂರ್ನಿಯಲ್ಲಿದ್ದವು.
ಮಾರ್ಚ್ 07ರಿಂದ ಆರಂಭವಾಗಿದ್ದ ಸರಣಿ ಮಾರ್ಚ್ 22ರವರೆಗೆ ನಡೆಯುತ್ತಿತ್ತು. ಟೂರ್ನಿ ಪಂದ್ಯದಿಂದ ಪಂದ್ಯಕ್ಕೆ ಕುತೂಹಲ ಕೆರಳಿಸಿತ್ತು. ಆದರೆ, ಕೊರೋನಾ ಭೀತಿ ಈ ಟೂರ್ನಿಗೂ ತಟ್ಟಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿ ರದ್ದಾದಂತೆ, ದಿಗ್ಗಜರ ಟೂರ್ನಿ ಕೂಡ ಕೊರೋನಾ ದೆಸೆಯಿಂದ ರದ್ದಾಗಿದೆ.
ರೋಡ್ ಸೇಫ್ಟಿ ಅತ್ಯಂತ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ಆಯೋಜನೆ ಮಾಡಲಾಗಿತ್ತು.
ಈಗಾಗಲೆ ವಿಶ್ವ ಕ್ರಿಕೆಟ್‌ನಿಂದ ದೂರವಾಗಿರುವ ದಿಗ್ಗಜ ಆಟಗಾರರನ್ನು ಮತ್ತೆ ಕ್ರಿಕೆಟ್ ಅಂಗಳದಲ್ಲಿ ಕಾಣುವ ವಿಶೇಷ ಅವಕಾಶ ಈ ಟೂರ್ನಿಯ ಮೂಲಕ ಪ್ರೇಕ್ಷಕರಿಗೆ ಲಭಿಸಿತ್ತು.
ಸಾರ್ವಜನಿಕರ ಹಿತದೃಷ್ಟಿಯಿಂದ ಆಯೋಜಕರು ಟೂರ್ನಿಯನ್ನು ಮುಂದೂಡುವ ನಿರ್ಧಾರಕ್ಕೆ ಒಪ್ಪಿದ್ದಾರೆ. ಕೊರೊನಾ ಭೀತಿಯಿಂದ ಮುಕ್ತವಾಗುವವರೆಗೂ ಪಂದ್ಯಗಳನ್ನು ನಡೆಸದೆ ಇರಲು ತೀರ್ಮಾನಿಸಲಾಗಿದೆ. ಉಳಿದ ಪಂದ್ಯಗಳ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಗೊಳಿಸುವುದಾಗಿ ಆಯೋಜಕರು ತಿಳಿಸಿದ್ದಾರೆ. ತಾತ್ಕಾಲಿಕ ರದ್ದಾಗಿದ್ದು, ಉಳಿದ ಪಂದ್ಯಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ತಿಳಿದುಬಂದಿದೆ.