ಮಹಾಲಯ ಅಮಾವಾಸ್ಯೆ ಅಂಗವಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುವ ಭಕ್ತರಿಗೆ ನಿರಾಸೆ ಕಾದಿದೆ. ಅಕ್ಟೋಬರ್ 5 ರಿಂದ 7 ತನಕ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿ ಮೈಸೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಮಂಗಳವಾರ, ಬುಧವಾರ ಮತ್ತು ಗುರುವಾರ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಅಕ್ಟೋಬರ್ 7ರ ಗುರುವಾರ 2021ನೇ ಸಾಲಿನ ದಸರಾಕ್ಕೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ದೊರೆಯಲಿದೆ.
ಕೋವಿಡ್ ಮಾರ್ಗಸೂಚಿಗಳ ಅನ್ವಯ ಹೆಚ್ಚು ಜನರು ಸೇರದಂತೆ ತಡೆಯಲು ಮೈಸೂರು ಜಿಲ್ಲಾಧಿಕಾರಿ ಗೌತಮ್ ಬುಗಾದಿ ಭಕ್ತರ ಪ್ರವೇಶವನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿದ್ದಾರೆ.
ದಸರಾ ಉದ್ಘಾಟನೆ; ಅಕ್ಟೋಬರ್ 7ರಂದು ಬೆಳಗ್ಗೆ 8.15ರಿಂದ 8.45ರ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ 2021ನೇ ಸಾಲಿನ ದಸರಾವನ್ನು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಉದ್ಘಾಟನೆ ಮಾಡಲಿದ್ದಾರೆ.
ದಸರಾ ಆರಂಭಗೊಂಡ ಬಳಿಕ ಮೈಸೂರು ಅರಮನೆ ಆವರಣದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಯುವ ದಸರಾ, ದಸರಾ ಆಹಾರ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ರದ್ದಾಗಿವೆ. ಅಕ್ಟೋಬರ್ 15ರಂದು ಜಂಬೂ ಸವಾರಿ ನಡೆಯಲಿದೆ.