ಚಾಮುಂಡಿ ಬೆಟ್ಟ ಹಿಂದೂಗಳದ್ದೇ ಆಗಿರುತ್ತದೆ: ಡಿಸಿಎಂ ಹೇಳಿಕೆಗೆ ಸಂಸದ ಯದುವೀರ್ ತಿರುಗೇಟು
ಮೈಸೂರು: ಚಾಮುಂಡಿ ಬೆಟ್ಟ ಹಿಂದೂಗಳದ್ದೇ ಆಗಿತ್ತು, ಹಿಂದೂಗಳಲ್ಲೇ ಇದೆ ಮತ್ತು ಎಂದಿಗೂ ಹಿಂದೂಗಳದ್ದೇ ಆಗಿರುತ್ತದೆ ಎಂದು ಕೊಡುಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಗೌರಿ ಹಬ್ಬದ ದಿನವೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ‘ಚಾಮುಂಡಿ ಬೆಟ್ಟ, ಚಾಮುಂಡಿ ದೇವರು ಹಿಂದೂಗಳ ಆಸ್ತಿ ಅಲ್ಲ ಎಂದಿರುವುದು ಅತ್ಯಂತ ದುಃಖಕರ ಮತ್ತು ಖಂಡನೀಯ. ಚಾಮುಂಡಿ ಬೆಟ್ಟವು ಶಕ್ತಿಪೀಠವಾಗಿದ್ದು, ಶಾಸ್ತ್ರಸಮ್ಮತವಾಗಿ ಪವಿತ್ರಗೊಂಡಿದೆ. ಕೋಟ್ಯಂತರ ಹಿಂದೂಗಳು ಆರಾಧಿಸುವ ಈ ದೇವಾಲಯ ಹಿಂದೂಗಳದ್ದೇ ಆಗಿತ್ತು, ಹಿಂದೂಗಳಲ್ಲೇ ಇದೆ ಮತ್ತು ಎಂದಿಗೂ ಹಿಂದೂಗಳದ್ದೇ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಯಾವಾಗಲೂ ಹಿಂದೂ ಭಾವನೆಗಳಿಗೆ ಧಕ್ಕೆ ತಂದು ತನ್ನ ನಕಲಿ ಸೆಕ್ಯುಲರಿಸಂ ಪ್ರದರ್ಶನ ಮಾಡುತ್ತಿದೆ. ಕರ್ನಾಟಕದ ಜನರು ಎಲ್ಲ ಧರ್ಮಗಳನ್ನೂ ಗೌರವಿಸುತ್ತಾರೆ. ಆದರೆ ಹಿಂದೂ ಹಬ್ಬಗಳು, ಸಂಪ್ರದಾಯಗಳು ಮತ್ತು ದೇವಾಲಯಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ಯಾವತ್ತೂ ಸಹಿಸುವುದಿಲ್ಲ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.