ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸಲು ಸಿಎಂ ಸೂಚನೆ
ಬೆಂಗಳೂರು: ಚಾಮುಂಡೇಶ್ವರಿ ದೇವಸ್ಥಾನಕ್ಕೆ 500 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಚಾಮುಂಡಿ ಬೆಟ್ಟದಲ್ಲಿ ಹಿಂದೆ ದೇವಿಯ ಚಿಕ್ಕದೊಂದು ದೇವಸ್ಥಾನವಿದ್ದು, ಕ್ರಮೇಣ ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಾಮುಖ್ಯತೆ ಗಳಿಸಿ, ಶ್ರೀ ಚಾಮುಂಡೇಶ್ವರಿ ಕ್ಷೇತ್ರವೆಂಬ ದೊಡ್ಡ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಯಾಗಿದೆ. ಆದ್ದರಿಂದ ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಸಂಬಂಧ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಕಳೆದ ನವೆಂಬರ್ 19ರಂದು ಕಾಂಗ್ರೆಸ್ MLC ದಿನೇಶ್ ಗೂಳಿಗೌಡ ಅವರು ಭಕ್ತರ ಪರವಾಗಿ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸಿ ಸಮರ್ಪಿಸಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಹಿನ್ನೆಲೆ ನಾಡದೇವಿ ಮೈಸೂರಿನ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಸಂಬಂಧ ಪರಿಶೀಲಿಸಿ, ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಕಂದಾಯ ಇಲಾಖೆ ಧಾರ್ಮಿಕ ದತ್ತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಅವರಿಗೆ ಆದೇಶಿಸಿದ್ದಾರೆ.