ರಾಜೇಶ್ ಕಾಲಿಯಾ. ಇಂದು ಚಂಡೀಗಡದ ಮಹಾಪೌರ. ಅಂದು ಒಂದು ಹೊತ್ತಿನ ಕೂಳಿಗಾಗಿ ಚಿಂದಿ ಆಯುತ್ತಾ ಶ್ರಮಿಸಿ ಜೀವನದ ವಿವಿಧ ಹಂತಗಳನ್ನು ಸವೆಸಿ ಬಂದ ರಾಜೇಶ್ಕಾಲಿಯಾ ಇಂದು ಚಂಡೀಗಡದ ಮಹಾ ಪೌರರಾಗಿದ್ದಾರೆ.
ಇತ್ತೀಚೆಗೆ ನಡೆದ ಮೇಯರ್ ಚುನಾವಣೆಯಲ್ಲಿ 46 ವರ್ಷದ ಬಿಜೆಪಿಯ ಕಾಲಿಯಾ ಪರವಾಗಿ ಚಂಡೀಗಡ ನಗರದ 27 ಕಾರ್ಪೋರೇಟರ್ಗಳ ಪೈಕಿ 16 ಕಾರ್ಪೋರೇಟರ್ಗಳು ಮತ ನೀಡಿದ್ದಾರೆ. ಈಗ ಅವರು ಚಂಡೀಗಡದ ಮಹಾನಗರದ ಮಹಾ ಪೌರರಾಗಿದ್ದಾರೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ ಕಾಲಿಯಾ, ತಾವು ಬೆಳೆದುಬಂದ ಹಾದಿ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕಾಲಿಯಾ ಅವರ ತಂದೆ ಕುಂದಲ್ ಲಾಲ್ ಪೌರಕಾರ್ಮಿಕರು. ಇವರ ಸಹೋದರರಲ್ಲಿ ಒಬ್ಬರು ಈಗಲೂ ಕಸ ಗುಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಸಂಬಂಧಿರು ಕೂಡ ಇದೇ ಕೆಲಸ ಮಾಡುತ್ತಿದ್ದಾರೆ.
ಶಾಲಾ ದಿನಗಳಲ್ಲಿ ಓದುತ್ತಿದ್ದ ಸಂದರ್ಭ ಗೆಳೆಯರ ಜತೆಯಲ್ಲಿ ಕಸದ ರಾಶಿ ನಡುವೆ ಚಿಂದಿ ಆಯುತ್ತಿದ್ದಾಗಿ ಹೇಳಿದ ರಾಜೇಶ್ ಕಾಲಿಯಾ ಬಳಿಕ ಸಂಗ್ರಹ ಮಾಡಿಕೊಂಡ ಚಿಂದಿಯನ್ನು ಮಾರಾಟ ಮಾಡಿ ತಮ್ಮ ಕುಟುಂಬದ ನಿರ್ವಹಣೆಗೆ ನೆರವು ನೀಡುತ್ತಿದ್ದೆ ಅಂತ ತಿಳಿಸಿದ್ದಾರೆ.
ಹರಿಯಾಣದ ಸೋನಿಪತ್ಜಿಲ್ಲೆಯ ಅಹುಲಾನಾ ಗ್ರಾಮದ ಕಾಲಿಯಾ 1977ರಲ್ಲಿ ಚಂಡೀಗಡಕ್ಕೆ ಆಗಮಿಸಿದರು. ಆರಂಭದಲ್ಲಿ ತಮ್ಮ ಸಹೋದರರೊಂದಿಗೆ ಶೆಡ್ಡೊಂದರಲ್ಲಿ ವಾಸಿಸುತ್ತಿದ್ದ ಕಾಲಿಯಾ ಚಿಂದಿ ಆಯುತ್ತಾ ಜೀವನ ಕಟ್ಟಿಕೊಂಡರು. ಮೇಯರ್ಆಗುವ ಕುರಿತಂತೆ ತಾವು ಕನಸಿನಲ್ಲೂ ಊಹಿಸಿರಲಿಲ್ಲ ಅಂತಾರೆ ಕಾಲಿಯಾ.
ಕಿರಿಯ ವಯಸ್ಸಿನಲ್ಲೇ ಆರ್ಎಸ್ಎಸ್ಹಾಗು ಬಿಜೆಪಿಯತ್ತ ಸೆಳೆತ ಬೆಳೆಸಿಕೊಂಡ ಕಾಲಿಯಾ, ತಾವು ಇಂದಿನ ಸ್ಥಿತಿ ತಲುಪಲು ಬಿಜೆಪಿಯೇ ಕಾರಣ ಎಂದಿದ್ದಾರೆ “ಚಹಾ ಮಾರುವವರನ್ನು ಪ್ರಧಾನಿ ಮಾಡುವ ಹಾಗು ಚಿಂದಿ ಆಯುವವರನ್ನು ಮೇಯರ್ಮಾಡುವ ದೇಶದ ಏಕೈಕ ಪಕ್ಷವೆಂದರೆ ಬಿಜೆಪಿ” ಎಂದು ಅವರು ಒತ್ತಿ ಹೇಳುತ್ತಾರೆ.
ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷರಾಗಿದ್ದ ರಾಜೇಶ್ ಕಾಲಿಯಾ ರಾಮ ಮಂದಿರ ಚಳವಳಿಯಲ್ಲಿ ಭಾಗಿಯಾಗಿ 15 ದಿನಗಳ ಮಟ್ಟಿಗೆ ಜೈಲು ವಾಸವನ್ನೂ ಅನುಭವಿಸಿದ್ದರು. 2011ರಲ್ಲಿ ಮೊದಲ ಬಾರಿಗೆ ಪೌರ ಸಂಸ್ಥೆ ಚುನಾವಣೆಯಲ್ಲಿ ಸ್ಫರ್ಧಿಸಿದ್ದ ಕಾಲಿಯಾ ಸೋಲು ಕಂಡಿದ್ದರು. ಆದರೆ ಸೋಲಿನಿಂದ ಎದೆಗುಂದದ ಕಾಲಿಯಾ 2016ರಲ್ಲಿ ಮತ್ತೊಮ್ಮೆ ಭಾಗವಹಿಸಿ ಯಶ ಸಾಧಿಸಿದ್ದರು.
ಒಟ್ಟಿನಲ್ಲಿ ಕಡುಕಷ್ಟದ ಬದುಕು ನಡೆಸುತ್ತಿದ್ದ ಕಾಲಿಯಾ, ಅನೇಕ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸಿ, ಹಂತ ಹಂತವಾಗಿ ಮಹಾಪೌರರಾಗಿ ಹುದ್ದೆಗೇರಿರುವುದು ದೊಡ್ಡ ಸಾಧನೆಯೇ ಸರಿ.