ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಟೊಮೇಟೊ ಬೆಲೆ ಭಾರೀ ಕುಸಿತ; ರೈತರಿಗೆ ಮತ್ತೆ ಸಂಕಷ್ಟ
ಚಿಕ್ಕಬಳ್ಳಾಪುರ: ಕೆಲ ದಿನಗಳ ಹಿಂದೆ ಆಕಾಶಕ್ಕೇರಿದ್ದ ಟೊಮೇಟೊ ಬೆಲೆ ಇದೀಗ ಮತ್ತೆ ಇಳಿಕೆಯಾಗಿದ್ದು, ಗ್ರಾಹಕರಿಗೆ ಖುಷಿ ತಂದರೆ ರೈತರಿಗೆ ದೊಡ್ಡ ಹೊಡೆತ ನೀಡಿದೆ. ಆಪಲ್ ಬೆಲೆಯನ್ನೂ ಮೀರಿದ್ದ ಟೊಮೇಟೊ ದರ, ಈಗ ತೀವ್ರ ಕುಸಿತ ಕಂಡಿದೆ.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಳಿ ಜಿಲ್ಲೆಗಳ ರೈತರು ಚಳಿ ಹೆಚ್ಚಿದ್ದರೂ ಯಥೇಚ್ಛವಾಗಿ ಟೊಮೇಟೊ ಬೆಳೆ ಬೆಳೆದಿದ್ದು, ಉತ್ತಮ ಫಸಲನ್ನೂ ಪಡೆದಿದ್ದರು. ಆದರೆ ಈಗ ಚಿಕ್ಕಬಳ್ಳಾಪುರ ಎಪಿಎಂಸಿ ಟೊಮೇಟೊ ಮಾರುಕಟ್ಟೆಯಲ್ಲಿ 15 ಕೆ.ಜಿ ಕ್ರೇಟ್‌ಗಳಿಗೆ ಕೇವಲ 250 ರೂ. ರಿಂದ 600 ರೂ. ವರೆಗೆ ಮಾತ್ರ ಬೆಲೆ ಸಿಗುತ್ತಿದೆ.
ಒಂದು ಎಕರೆ ಟೊಮೇಟೊ ಬೆಳೆಗೆ 50 ಸಾವಿರ ರೂ.ಗಿಂತ ಹೆಚ್ಚು ವೆಚ್ಚವಾಗುತ್ತದೆ. ಟೊಮೇಟೊ ನಾರು, ಗೊಬ್ಬರ, ಕೀಟನಾಶಕ, ಕೂಲಿ, ಉಳುಮೆ ಹಾಗೂ ಸಾಗಾಟಕ್ಕೆ ರೈತರು ಸಾಲ ಮಾಡಿಕೊಂಡೇ ಬೆಳೆ ಬೆಳೆಸುತ್ತಾರೆ. ಆದರೆ ಇದೀಗ ಟೊಮೇಟೊ ಹಣ್ಣಿಗೆ ಸಿಗುತ್ತಿರುವ ಕಡಿಮೆ ದರ ರೈತರನ್ನು ಆತಂಕಕ್ಕೆ ದೂಡಿದೆ.
ಉತ್ತರ ಕರ್ನಾಟಕ ಭಾಗದಲ್ಲೂ ಟೊಮೇಟೊ ಬೆಳೆಯ ಆರಂಭವಾದುದು ಹಾಗೂ ನೆರೆ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೊ ಮಾರುಕಟ್ಟೆಗೆ ಬರುತ್ತಿರುವುದೇ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ರಾಜ್ಯದಾದ್ಯಂತ ಏಕಕಾಲಕ್ಕೆ ಟೊಮೇಟೊ ಫಸಲು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು ದರ ಕುಸಿತಕ್ಕೆ ಕಾರಣವಾಗಿದೆ.
ಕಳೆದ ವಾರವಷ್ಟೇ 15 ಕೆ.ಜಿ ಬಾಕ್ಸ್‌ಗೆ 600 ರೂ. ರಿಂದ 800 ರೂ.ವರೆಗೆ ಇದ್ದ ಬೆಲೆ, ಈಗ ಕೆಲವು ಮಂಡಿಗಳಲ್ಲಿ 150 ರೂ. ರಿಂದ 250 ರೂ.ಕ್ಕೆ ಇಳಿದಿದೆ. ರೈತರಿಗೆ ಕಡಿಮೆ ದರ ಸಿಗುತ್ತಿದ್ದರೂ, ಬೆಂಗಳೂರಿನಂತಹ ನಗರಗಳ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೇಟೊ ಕೆಜಿಗೆ 30 ರೂ. ರಿಂದ 50 ರೂ. ದರದಲ್ಲಿ ಮಾರಾಟವಾಗುತ್ತಿದೆ. ಕೆಲವು ಮಂಡಿಗಳಲ್ಲಿ ರೈತರಿಗೆ ಕೆಜಿಗೆ ಕೇವಲ 10 ರೂ. ರಿಂದ 15 ರೂ. ಮಾತ್ರ ಸಿಗುತ್ತಿದೆ.
ಕಷ್ಟಪಟ್ಟು ಬೆಳೆದ ಟೊಮೇಟೊಗೆ ಬೆಲೆ ಸಿಗದ ಹಿನ್ನೆಲೆಯಲ್ಲಿ ರೈತರು ತೋಟಗಳ ಕಡೆ ಗಮನ ಕಡಿಮೆ ಮಾಡಿದ್ದು, ಭವಿಷ್ಯದಲ್ಲಿ ಬೆಳೆ ನಿರ್ವಹಣೆಯಲ್ಲೂ ತೊಂದರೆ ಉಂಟಾಗುವ ಆತಂಕ ವ್ಯಕ್ತಪಡಿಸಿದ್ದಾರೆ.






