ಚಿನ್ನ ಸಾಗಾಟ ಪ್ರಕರಣ: ನಟಿ ರನ್ಯಾ ರಾವ್ ಪತಿ ಜತೀನ್ ಗೆ ಬಿಗ್ ರಿಲೀಫ್
ಬೆಂಗಳೂರು: ರನ್ಯಾ ರಾವ್ ಪ್ರಕರಣ ಮತ್ತಷ್ಟು ಜಟಿಲ ಸ್ವರೂಪ ಪಡೆಯುತ್ತಿದೆ. ಈ ಪ್ರಕರಣದ ತನಿಖೆಯನ್ನು ಡಿಆರ್‌ಐ ಮತ್ತು ಸಿಬಿಐ ಈಗಾಗಲೇ ತೀವ್ರಗೊಳಿಸಿವೆ. ಚಿನ್ನದ ಕಳ್ಳಸಾಗಣೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ಮೇಲೂ ಪೊಲೀಸರು ತನಿಖೆ ಕೈಗೊಂಡಿದ್ದರು.
ಇದೀಗ ರನ್ಯಾ ಪತಿ ಜತಿನ್ ಹುಕ್ಕೇರಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ ನೀಡಿದೆ. ಜೊತೆಗೆ ಅರ್ಜಿ ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿದೆ.
ಆರೋಪಿ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ಬಲವಂತದ ಕ್ರಮ ಕೈಗೊಳ್ಳದಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ನ್ಯಾ.ಹೇಮಂತ್ ಚಂದನಗೌಡರ್ ಪೀಠದಲ್ಲಿ ಅರ್ಜಿ ವಿಚಾರಣೆ ಮಾಡಲಾಗಿದ್ದು, ಜತಿನ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.
ಯಾವಾಗ ಆಕ್ಷೇಪಣೆ ಅರ್ಜಿ ಸಲ್ಲಿಕೆ ಮಾಡುತ್ತೀರಿ ಎಂದು ಜಡ್ಜ್ ಪ್ರಶ್ನಿಸಿದ್ದು, ಸೋಮವಾರ ಆಕ್ಷೇಪಣೆ ಸಲ್ಲಿಸುವುದಾಗಿ ಡಿಆರ್ಐ ಪರ ವಕೀಲರು ಹೇಳಿದ್ದಾರೆ. ಹೀಗಾಗಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್ 24ಕ್ಕೆ ಮುಂದೂಡಿದ್ದು, ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದೆ.