ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಇನ್ನಿಲ್ಲ
ಶ್ರೀನಗರ: ಅನಾರೋಗ್ಯದಿಂದ ಬಳಲುತ್ತಿದ್ದ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಮಲಿಕ್ ಅವರಿಗೆ ಮೂತ್ರಪಿಂಡ ಸಂಬಂಧಿತ ಸಮಸ್ಯೆ ಇದ್ದ ಕಾರಣದಿಂದಾಗಿ ಅವರನ್ನು ದೆಹಲಿಯ ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ರಾಜಕೀಯವಾಗಿ ನಿರ್ವಿವಾದ ವ್ಯಕ್ತಿತ್ವ ಹೊಂದಿದ್ದ ಮಲಿಕ್, ತಮ್ಮ ನಿಷ್ಠುರ ಅಭಿಪ್ರಾಯಗಳಿಂದ ಗುರುತಿಸಿಕೊಂಡವರು. ಕೃಷಿ ಕಾನೂನುಗಳ ವಿರೋಧದ ಚಳುವಳಿಗೆ, ಭ್ರಷ್ಟಾಚಾರದ ವಿರುದ್ಧವಾದ ಮಾತುಗಳಿಗೆ ಅವರು ರಾಷ್ಟ್ರಮಟ್ಟದಲ್ಲಿ ಚರ್ಚಿತ ವ್ಯಕ್ತಿಯಾಗಿದ್ದರು.
ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯವರಾದ ಮಲಿಕ್, ತಮ್ಮ ರಾಜಕೀಯ ಜೀವನವನ್ನು 1970ರಲ್ಲಿ ಚೌಧರಿ ಚರಣ್ ಸಿಂಗ್ ಅವರ ನೇತೃತ್ವದ ಭಾರತೀಯ ಕ್ರಾಂತಿ ದಳದಿಂದ ಆರಂಭಿಸಿದರು. ಶಾಸಕರಾಗಿ ತಮ್ಮ ಮೊದಲ ಪಾದಾರ್ಪಣೆ ಮಾಡಿದ ಅವರು, ಬಳಿಕ ಸುಮಾರು 50 ವರ್ಷಗಳ ಕಾಲ ರಾಜಕೀಯ ಬದುಕಿನಲ್ಲಿ ಸಕ್ರಿಯರಾಗಿ ಇದ್ದರು.
ಈ ಅವಧಿಯಲ್ಲಿ ಮಲಿಕ್ ಹಲವು ರಾಜಕೀಯ ಪಕ್ಷಗಳಲ್ಲಿ ಸೇವೆ ಸಲ್ಲಿಸಿದರು. ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಅವರು, ಜಮ್ಮು-ಕಾಶ್ಮೀರ, ಗೋವಾ ಹಾಗೂ ಮೆಘಾಲಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು.