ಇಬ್ಬರು ಯುವತಿಯರು ಮತ್ತು ಇಬ್ಬರು ಯುವಕರು ಮನೆಯಲ್ಲಿ ಹೇಳದೆ ಕೇಳದೆ ಜಾಲಿ ರೇಡ್ ಹೋಗಿದ್ದರು. ಹುಡುಗಿಯರಿದ್ದಾರೆಂಬ ಜೋಶೋ, ಹುಚ್ಟಾಟವೋ, ತಿಕಲು ತನವೋ ಕಾರನ್ನು ಚಲಾಯಿಸುತ್ತಿದ್ದವ ಯರ್ರಾಬಿರ್ರಿ ಕಾರು ಚಲಾಯಿಸಿ, ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆಸಿದ್ದಾನೆ. ನಂತರ ಗಾಡಿ ಬಸ್ಸಿಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಯವತಿ ಸಾವನ್ನಪ್ಪಿದ್ದಾಳೆ. ಉಳಿದವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಹೌದು ಅವಳಿ ಜೋಡಿ ಜಾಲಿ ರೇಡ್ ಗೆ ಹೊರಟಿದ್ದ ವೇಳೆ ಕಾರು ಅಪಘಾತಕ್ಕೀಡಾಗಿ ಯುವತಿ ಮೃತಪಟ್ಟಿರುವ ಘಟನೆ ಪಡುಬಿದ್ರಿ ಬೀಡು ಬಳಿ ಸಂಭವಿಸಿದೆ.
ಕುಪ್ಪೆ ಪದವು ನಿವಾಸಿ ನಿಶ್ಚಿತ ಪೂಜಾರಿ (21) ಮೃತ ದುರ್ದೈವಿ. ಈ ದುರ್ಘಟನೆಯಲ್ಲಿ ಮುಲ್ಕಿ ಬಪ್ಪನಾಡು ಹಾಲಿ ತೋಟ ನಿವಾಸಿ ಹರ್ಷಿತ (19), ಮಂಗಳೂರು ಪಡೀಲ್ ನಿವಾಸಿ ಗುರುಕಿರಣ್ (26), ಮುಲ್ಕಿ ಕಾರ್ನಾಡಿನ ಗೇರುಕಟ್ಟೆ ನಿವಾಸಿ ಧನುಷ್ (23) ಗಾಯಗೊಂಡಿದ್ದಾರೆ.
ಚಾಲಕನ ನಿರ್ಲಕ್ಷ್ಯ ಮತ್ತು ಅತೀ ವೇಗದ ಚಾಲನೆಯಿಂದ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು, ಬಳಿಕ ಮಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸಿಗೆ ಗುದ್ದಿದೆ. ಕಾರು ಸಂಪೂರ್ಣ ಜಖುಂಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದರು. ಕೂಡಲೇ ಉಡುಪಿ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ನಿಶ್ವಿತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಗುರುಕಿರಣ್ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹರ್ಷಿತ್, ಧನುಷಗೆ ಸಿದ್ಧಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಧನುಷ್ ಮನೆಗೆ ತೆರಳಿದ್ದು, ಹರ್ಷಿತ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಳಿಕ ಪೋಷಕರಿಗೆ ವಿಷಯ ತಿಳಿದ ಮೇಲೆ ಮನೆಯಲ್ಲಿ ಹೇಳದೆ ಜಾಲಿ ರೇಡ್ ಹೋದ ವಿಚಾರ ಬೆಳಕಿಗೆ ಬಂದಿದೆ. ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಹುಚ್ಚಾಟ ಜೀವಕ್ಕೇ ಕುತ್ತುತಂದಿದೆ.