ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆ ನಡೆದಿದೆ. ಜೈಲಿನ ರಾಜಾತಿಥ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಿಂದ ಸಿಸಿಬಿ (CCB) ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಸಂಬಂಧ ನಟ ದರ್ಶನ್ ಆಪ್ತ ಹಾಗೂ ನಟ ಧನ್ವೀರ್ ಅವರನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗ್ತಿದೆ. ದರ್ಶನ್ ನೋಡಲು ನಟ ಧನ್ವೀರ್ ಆಗಾಗ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡುತ್ತಿರುತ್ತಾರೆ. ನಿನ್ನೆ ಸಂಜೆ ಸಿಸಿಬಿ ಪೊಲೀಸರು ಧನ್ವೀರ್ ಅವರ ಮೊಬೈಲ್ ವಶಕ್ಕೆ ಪಡೆದು ಕೆಲ ಕಾಲ ವಿಚಾರಣೆ ನಡೆಸಿದ್ದಾರೆ ಎನ್ನಲಾಗ್ತಿದೆ.
ವಿಡಿಯೋಗಳ ವೈರಲ್ ಬಗ್ಗೆ ನಟ ಧನ್ವೀರ್ ಅವರನ್ನ ಕೂಡ ವಿಚಾರಣೆ ನಡೆಸಲಾಗಿದೆ ಎನ್ನಲಾಗ್ತಿದೆ. ಅಧಿಕಾರಿಗಳು ಧನ್ವೀರ್ ಮೊಬೈಲ್ ಪರಿಶೀಲನೆ ನಡೆಸಿದ್ದು, ಯಾವುದೇ ಸಾಕ್ಷ್ಯ ಹಾಗೂ ವಿಡಿಯೋಗಳು ಸಿಗಲಿಲ್ಲ. ಧನ್ವೀರ್ ಅವರೇ ವೈರಲ್ ಮಾಡಿದ್ದಾರೆ ಅನ್ನೋದಕ್ಕೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎನ್ನಲಾಗ್ತಿದೆ.






