ರಾಜ್ಯದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಮೂಡುಬಿದರೆಯ ಶಂಕರ್ ಕೊಟ್ಯಾನ್ ಕೈ ತುಂಬಾ ಸಂಬಳ ಬರುವ ಆಧುನಿಕ ಕೆಲಸವನ್ನು ಬಿಟ್ಟು ಹೊಸ ಹೆಜ್ಜೆ ಇಟ್ಟಿದ್ದಾರೆ.
ಶಂಕರ್ ಕೋಟ್ಯಾನ್ ಈಗ ಹೈನುಗಾರನಾಗಿದ್ದರೂ, ಅವರೊಬ್ಬ ಟೆಕ್ಕಿ. ಕೆಲಸ ಬೇಕು ಅಂದ್ರೆ ಎಲ್ಲಿ ಬೇಕಾದ್ರೂ ಅದನ್ನು ಪಡೆಯಬಲ್ಲ ಪ್ರತಿಭಾವಂತರು. ಕೈ ತುಂಬಾ ಸಂಬಳವನ್ನು ಈಗ ಬೇಕಾದ್ರೂ ಸಂಪಾದಿಸಬಲ್ಲರು. ಆದ್ರೆ ಶಂಕರ್ ಕೋಟ್ಯಾನ್ಗೆ ಅದು ಯಾವುದೂ ಕೂಡ ಇಷ್ಟವಿಲ್ಲ. ಮನಶಾಂತಿಯನ್ನು, ನೆಮ್ಮದಿಯನ್ನು ಕೆಡಿಸುವ ಕೆಲಸಕ್ಕಿಂತ, ಕಷ್ಟಪಟ್ಟು ಸಂಪಾದನೆ ಮಾಡಿದ ಮನೋಶಾಂತಿಯೇ ತುಂಬಾ ಮಹತ್ವದ್ದು ಅನ್ನೋದನ್ನ ಬಹುಬೇಗನೆ ಅರಿತುಕೊಂಡಿದ್ದಾರೆ.
2012ರಲ್ಲಿ ಶಂಕರ್ ಅವರಿಗೆ ಕೈ ತುಂಬಾ ಸಂಬಳ ಬರುತ್ತಿತ್ತು. ಆದ್ರೆ, ಅವರು ಸಮಾಜದಲ್ಲಿ ಒಂದು ವ್ಯಕ್ತಿತ್ವವನ್ನು ಬೆಳೆಸಿಕೊಡಬಲ್ಲ ಕೆಲಸಕ್ಕೆ ಗುಡ್ ಬೈ ಹೇಳಿದ್ರು. ಅವರಿಗೆ ಮುಂದೇನು ಮಾಡ್ಬೇಕು ಅನ್ನೋ ಗುರಿ ಸ್ಪಷ್ಟವಾಗಿತ್ತು. ಹೀಗಾಗಿ ಹಿಂದೆಮುಂದೆ ನೋಡದೇ ಕೆಲಸಕ್ಕೆ ರಾಜೀನಾಮೆ ನೀಡಿದ್ರು.
ಶಂಕರ್ ಕೆಲಸಕ್ಕೆ ರಾಜಿನಾಮೆ ನೀಡಿದ್ದು ಅದೆಷ್ಟೋ ಜನರಿಗೆ ಶಾಕ್ ನೀಡಿತ್ತು. ಆದ್ರೆ ,ಶಂಕರ್ ಇನ್ನೊಬ್ಬರ ಮಾತನ್ನು ಕೇಳೋದು ಬಿಟ್ಟು ತಾನು ಮುಂದೇನು ಮಾಡಬೇಕು ಅನ್ನೋ ಬ್ಲೂ ಪ್ರಿಂಟ್ನ್ನು ಮೊದಲೇ ಸಿದ್ಧಪಡಿಸಿದ್ದರು. ಹೀಗಾಗಿ ಸಾಗುವ ದಾರಿಯ ಬಗ್ಗೆ ಅವರಿಗೆ ಸ್ಪಷ್ಟ ಚಿತ್ರಣವಿತ್ತು .
ಸಂಬಳ ಬರುವ ಕೆಲಸಕ್ಕೆ ಗುಡ್ ಬೈ ಹೇಳಿದ ಶಂಕರ್, ಆರಂಭಿಸಿದ್ದು ಡೈರಿ ಫಾರ್ಮ್ನ್ನು. ಆದ್ರೆ, ಇದು ಆರಂಭದಲ್ಲಿ ಅಂದುಕೊಂಡಷ್ಟು ಉತ್ಪಾದನೆಯನ್ನು ತಂದುಕೊಡಲಿಲ್ಲ. ಆದ್ರೆ, ಶಂಕರ್ ಅವರಿಗೆ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಕೈ ಬಿಡಲಿಲ್ಲ.
2012ರಲ್ಲಿ ಕೇವಲ 5 ಹಸುಗಳೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿದ ಶಂಕರ್ ಅವರ ಡೈರಿ ಫಾರ್ಮ್, ಬಗ್ಗೆ ನಕ್ಕವರೇ ಹೆಚ್ಚು. ಎಂಜಿನಿಯರಿಂಗ್ ಕಲಿತವನಿಗೆ ಈ ಕೆಲಸ ಯಾಕೆ ಬೇಕಿತ್ತು ಅಂತಾ ಅಂದುಕೊಂಡವರೇ ಹೆಚ್ಚು. ಆದ್ರೆ ಹಠಕ್ಕೆ ಹೆಮ್ಮಾರಿ ಕೂಡ ಹೆದರುತ್ತೆ ಅನ್ನೋದನ್ನ ಶಂಕರ್ ಮಾಡಿ ತೋರಿಸಿದ್ರು.
ಇವತ್ತು ಶಂಕರ್ ಅವರ ಡೈರಿಯಲ್ಲಿ ಬರೋಬ್ಬರಿ 40 ಹಸುಗಳಿವೆ. ಯಶಸ್ವಿ ಹೈನುಗಾರನಾದ ಶಂಕರ್, ಪ್ರತಿದಿನ ಸುಮಾರು 200 ಲೀಟರ್ ಹಾಲನ್ನು ಹಾಲು ಉತ್ಪಾದಕರ ಸಂಘಕ್ಕೆ ನೀಡುತ್ತಿದ್ದಾರೆ. ಮತ್ತೆ ಟೆಕ್ಕಿಯಾಗಿ ಕೆಲಸ ಮಾಡುತ್ತಾ ಲಕ್ಷ ಲಕ್ಷ ಹಣ ಗಳಿಸುತ್ತಿದ್ಧಾಗಲೂ ಶಂಕರ್ಗೆ ಮನದ ಆಳದಲ್ಲೆಲ್ಲೋ ಕೃಷಿಯೆಡೆಗಿನ ಮೋಹವೂ ಬೆಳೆಯುತ್ತಿತ್ತು. ತನ್ನ ಊರು, ಕುಟುಂಬದವರು ಮಾಡುತ್ತಿದ್ದ ಕೃಷಿ ಎಲ್ಲವೂ ಅವರನ್ನು ಊರಿನತ್ತ ಸೆಳೆಯುತ್ತಿದ್ದವು.
ಶಂಕರ್ ಅವರಿಗೆ 6 ಎಕರೆ ಇಳಿಜಾರಾಗಿರುವ ಜಮೀನು ಇದೆ. ಇದರ ಸದುಪಯೋಗವನ್ನು ಸರಿಯಾಗಿ ಮಾಡಿಕೊಳ್ಳುತ್ತಿದ್ದಾರೆ. ಶಂಕರ್ ಎತ್ತರದ ಪ್ರದೇಶದಲ್ಲಿ ಡೈರಿ ಫಾರ್ಮ್ ರೂಪಿಸಿದ್ದು, ಅಲ್ಲಿಂದ ಯಾವುದೇ ಪಂಪಿಂಗ್ ಇಲ್ಲದೆ ಗುರುತ್ವಾಕರ್ಷಣೆ ಬಲದಿಂದಲೇ ಸಗಣಿ ನೀರು ಪೈಪುಗಳ ಮೂಲಕ ಹರಿಯುತ್ತದೆ. ದಿನವೊಂದಕ್ಕೆ ಸುಮಾರು ಒಂದು ಟನ್ ನಷ್ಟು ಹುಲ್ಲಿನ ಅಗತ್ಯವಿದ್ದು ಅದರಲ್ಲಿ ಶೇಕ80ರಷ್ಟು ಹುಲ್ಲನ್ನು ತಮ್ಮ ಜಮೀನಿನಲ್ಲಿಯೇ ಬೆಳೆಯುತ್ತಿದ್ದಾರೆ.
ಒಟ್ಟಿನಲ್ಲಿ ಏನೇ ಹೇಳಿ, ಈಗಿನ ಯುವಕರು ಸಾಫ್ಟ್ವೇರ್ ಲೋಕದಲ್ಲೇ ಮುಳುಗಿ ಲಕ್ಷ ಲಕ್ಷ ಹಣ ಎಣಿಸಿಕೊಂಡು ಅದನ್ನೇ ಜೀವನ ಎಂದು ಬದುಕುತ್ತಿದ್ದಾರೆ. ವಿದೇಶಗಳಲ್ಲಿ ಕೆಲಸ ಮಾಡಿದ್ದರೂ ಕೃಷಿ, ಹೈನುಗಾರಿಕೆಯಿಂದ ಸಂತೃಪ್ತಿಯ ಜೀವನ ನಡೆಸುತ್ತಿರುವ ಶಂಕರ್ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ.