ಟೊಮೆಟೊ ತಿಂದ್ರೆ ಕಿಡ್ನಿ ಸ್ಟೋನ್ ಆಗುತ್ತಾ? ಇಲ್ಲಿದೆ ನೋಡಿ ನಿಮ್ಮ ಗೊಂದಲಕ್ಕೆ ಉತ್ತರ
ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ (Kidney Stone) ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ಕುರಿತು ಹಲವಾರು ತಪ್ಪು ಕಲ್ಪನೆಗಳು ಜನರಲ್ಲಿ ಹರಡಿವೆ. ವಿಶೇಷವಾಗಿ, ಟೊಮೇಟೊ ಸೇವನೆ ಮಾಡಿದರೆ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳುತ್ತವೆ ಎಂಬ ನಂಬಿಕೆ ಸಾಮಾನ್ಯ. ಕೆಲವರು ಕಿಡ್ನಿ ಸ್ಟೋನ್ ಕಂಡುಬಂದ ತಕ್ಷಣ ಟೊಮೇಟೊ ಸಂಪೂರ್ಣವಾಗಿ ತ್ಯಜಿಸುವುದು ಸಹ ಕಂಡುಬರುತ್ತಿದೆ. ಆದರೆ ಆರೋಗ್ಯ ತಜ್ಞರು ಈ ನಂಬಿಕೆಯನ್ನು ಆಧಾರರಹಿತ ಎಂದು ಹೇಳುತ್ತಾರೆ.
ತಜ್ಞರ ಪ್ರಕಾರ, ಟೊಮೇಟೊಗಳಲ್ಲಿ ಇರುವ ಆಕ್ಸಲೇಟ್ ಅಂಶ ಅತ್ಯಲ್ಪ. ಸಾಮಾನ್ಯವಾಗಿ 100 ಗ್ರಾಂ ಟೊಮೇಟೊದಲ್ಲಿ ಕೇವಲ 5 ಮಿಲಿಗ್ರಾಂ ಆಕ್ಸಲೇಟ್ ಅಂಶವಿದ್ದು, ಇದು ಕಲ್ಲುಗಳ ನಿರ್ಮಾಣಕ್ಕೆ ಸಾಕಾಗುವುದಿಲ್ಲ. ಆದ್ದರಿಂದ ಟೊಮೇಟೊ ಸೇವನೆಯಿಂದ ಕಿಡ್ನಿ ಸ್ಟೋನ್ ಉಂಟಾಗುತ್ತದೆ ಎಂಬ ನಂಬಿಕೆ ವೈಜ್ಞಾನಿಕವಾಗಿ ತಳ್ಳಿಹಾಕಲಾಗಿದೆ.
ಕಿಡ್ನಿ ಸ್ಟೋನ್‌ಗೆ ಕಾರಣವಾಗುವ ಪ್ರಮುಖ ಅಂಶಗಳು
ನಿರ್ಜಲೀಕರಣ: ದಿನಕ್ಕೆ ಕನಿಷ್ಠ 2.5–3 ಲೀಟರ್ ನೀರು ಕುಡಿಯದಿದ್ದರೆ ಕಲ್ಲುಗಳ ಅಪಾಯ ಹೆಚ್ಚಾಗುತ್ತದೆ.
ಮೆಟಾಬೊಲಿಕ್ ಸಮಸ್ಯೆಗಳು: ಕೆಲವು ಕಿಣ್ವಗಳ ಕೊರತೆಯಿಂದಲೂ ಅಥವಾ ಆಕ್ಸಲೋಸಿಸ್ ಎಂಬ ಅಪರೂಪದ ಅಸ್ವಸ್ಥತೆಯಿಂದಲೂ ಕಲ್ಲುಗಳು ರೂಪುಗೊಳ್ಳುತ್ತವೆ.
ವೈವಿಧ್ಯಮಯ ಕಲ್ಲುಗಳು: ಕ್ಯಾಲ್ಸಿಯಂ ಆಕ್ಸಲೇಟ್ ಜೊತೆಗೆ ಯೂರಿಕ್ ಆಮ್ಲ, ಸ್ಟ್ರುವೈಟ್ ಹಾಗೂ ಸಿಸ್ಟೈನ್ ಕಲ್ಲುಗಳಿಂದಲೂ ಸಮಸ್ಯೆ ಉಂಟಾಗಬಹುದು.
ಮಾಂಸಾಹಾರ ಸೇವನೆ: ಕೆಲ ಮಾಂಸಾಹಾರ ಪದಾರ್ಥಗಳ ಸೇವನೆಯಿಂದ ಕಿಡ್ನಿ ಸ್ಟೋನ್ ಅಪಾಯ ಹೆಚ್ಚಾಗುತ್ತದೆ ಎನ್ನುವ ನಂಬಿಕೆಗೆ ಸಾಕ್ಷ್ಯವಿಲ್ಲ.
ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಇತರ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿರುವವರು ಪ್ರೋಟೀನ್ ಪ್ರಮಾಣ ಕಡಿಮೆ ಇರುವ ಆಹಾರವನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಆದಾಗ್ಯೂ, ಆಹಾರ ಬದಲಾವಣೆಗೂ ಮುನ್ನ ವೈದ್ಯರ ಸಲಹೆ ಪಡೆಯುವುದು ಅತ್ಯಾವಶ್ಯಕ. ತಜ್ಞರ ಸ್ಪಷ್ಟನೆ ಪ್ರಕಾರ, ಟೊಮೇಟೊ ಸೇವನೆಯನ್ನು ನಿಲ್ಲಿಸುವ ಅಗತ್ಯವಿಲ್ಲ, ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ ಮತ್ತು ಆರೋಗ್ಯಕರ ಜೀವನಶೈಲಿಯೇ ಕಿಡ್ನಿ ಸ್ಟೋನ್ ತಡೆಗಟ್ಟುವ ಪ್ರಮುಖ ವಿಧಾನ.






